ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವರು ಗೋಚರವಾಗಿ ಸುಮಾರು ೬೦೦ ವರ್ಷಗಳು ಕಳೆದಿವೆ. ಈ ಕ್ಷೇತ್ರದ ಪೂರ್ವೇತಿಹಾಸದ ರೀತಿ ವಿಳ್ಳೇದೆಲೆ ವ್ಯಾಪಾರಿಯೊಬ್ಬ ವ್ಯಾಪಾರಾರ್ಥ ಹೋಗಿ ಬರುವಾಗ ಇಲ್ಲಿ ತಂಗುತ್ತಿದ್ದನಂತೆ. ಆ ವ್ಯಾಪಾರಿಯು ಪಕ್ಕದಲ್ಲೇ ಇರುವ ಕುಮಾರತೀರ್ಥದ ಬಳಿ ಊಟ ಮಾಡಿ, ನೀರು ಕುಡಿದು (ಆಗ ಕುಮಾರ ತೀರ್ಥ ಕೇವಲ ಒಂದು ಸಣ್ಣ ದೋಣಿಯೋಪಾದಿಯಲ್ಲಿತ್ತಂತೆ) ಬಂದು, ಈಗ ಮೂಲಸ್ವಾಮಿ ಇರುವ ಬಲಭಾಗದಲ್ಲಿ ಏಳು ಹೆಡೆಗಳು ಉದ್ಭವಿಸಿರುವ ಶಿಲೆಯ ಮೇಲೆಯೇ ಮಲಗುತ್ತಿದ್ದನಂತೆ.
ಒಮ್ಮೆ ಆತ ಮಲಗಿದ್ದಾಗ ‘ನೆರಳಾಗಿರುವ ಮರದಡಿಯ ಈ ಶಿಲೆಯ ಮೇಲೆ ಭಾರವಾಗಿ ಏಕೆ ಮಲಗಿರುವೆ ಏಳು ಏಳು’ ಎಂಬ ಮಾತುಗಳು ಕೇಳಿತಂತೆ. ಇದು ಹಲವು ಬಾರಿ ಪುನರಾವರ್ತನೆಯಾಯಿತು. ಆಗ ಆತ ಇದು ಯಾವುದೋ ದುಷ್ಟಶಕ್ತಿಯ ಕೀಟಲೆ ಇರಬೇಕು ಎಂದುಕೊಂಡು ಸುಮ್ಮನಾದನಂತೆ.
ಒಂದು ಹಬ್ಬದ ದಿನ ಎಲೆ ಮಾರಿ ಆಯಾಸಗೊಂಡು ಆತ ಅದೇ ಶಿಲೆಯ ಮೇಲೆ ಮಲಗಿದ್ದಾಗ, ಸ್ವಾಮಿಯು ಕನಸಿನಲ್ಲಿ ವ್ಯಾಪಾರಿಗೆ ತನ್ನ ನಿಜ ಸ್ವರೂಪದಲ್ಲಿ ದರ್ಶನ ನೀಡಿ, ತಾನು ಈ ಶಿಲೆಗೆ ೨೦ ಗಜಾಂತರದಲ್ಲಿ ಇರುವುದಾಗಿಯೂ ಈ ವಿಷಯವನ್ನು ತನ್ನ ಭಕ್ತರಾದ ಬಳ್ಳಾರಿ ಜಿಲ್ಲೆಯ ಸಂಡೂರಿನ ಮಹಾರಾಜರಿಗೆ ಈ ವಿಷಯ ತಿಳಿಸು, ಅವರು ಇಲ್ಲಿ ಗುಡಿಗೋಪುರ ಕಟ್ಟಿಸುತ್ತಾರೆ’ ಎಂಬುದಾಗಿ ತಿಳಿಸಿತು.
ನಿನಗೆ ನಾನು ಜೀವನಾಂತ್ಯದಲ್ಲಿ ಮುಕ್ತ ನೀಡುವೆನು ಎಂದು ಆಣತಿ ನೀಡಿ, ಅದೃಶ್ಯನಾದನಂತೆ. ಈ ಸ್ವಪ್ನ ದಿಂದ ಎಚ್ಚೆತ್ತ ವ್ಯಾಪಾರಿ ಎದುರು ಒಬ್ಬ ಬ್ರಾಹ್ಮಣನನ್ನು ಕಂಡು, ಎಲ್ಲ ವೃತ್ತಾಂತವನ್ನೂ ಆ ಬ್ರಾಹ್ಮಣನಿಗೆ ತಿಳಿಸಿದನಂತೆ. ಬ್ರಾಹ್ಮಣ ಆ ಶಿಲೆಯ ಬಳಿ ಬಂದಾಗ, ಸ್ವಾಮಿಯು ಕ್ಷಣ ಮಾತ್ರ ಸರ್ಪ ರೂಪದಲ್ಲಿ ಬ್ರಾಹ್ಮಣನಿಗೂ ದರ್ಶನ ನೀಡಿ ಅಂತರ್ಧಾನನಾದನು.
ಆಗ ಬ್ರಾಹ್ಮಣ ಮತ್ತು ವ್ಯಾಪಾರಿ ಇಬ್ಬರೂ ಕೂಡಿ ಸಂಡೂರಿಗೆ ಹೋಗಿ ರಾಜರ ದರ್ಶನ ಮಾಡಿ ತಮ್ಮ ಸ್ವಪ್ನದ ವೃತ್ತಾಂತ ತಿಳಿಸಿದರಂತೆ. ಆದರೆ, ರಾಜನು ತನಗೆ ಹಲವು ರಾಜಕಾರ್ಯಗಳಿದ್ದು, ತತ್‌ಕ್ಷಣವೇ ಅಲ್ಲಿಗೆ ಬರಲಾಗುವುದಿಲ್ಲವೆಂದೂ, ಅಗತ್ಯವಿದ್ದರೆ ಧನಕನಕ ಸಹಾಯ ಮಾಡುವುದಾಗಿಯೂ, ನೀವೇ ದೇಗುಲ ಕಟ್ಟಿ ಎಂದು ಹೇಳಿದನಂತೆ.
ಇದರಿಂದ ನೊಂದ ವರ್ತಕ ಮತ್ತು ಬ್ರಾಹ್ಮಣನು, ಮಹಾಸ್ವಾಮಿ ಆ ಭಗವಂತನ ಆಣತಿಯನ್ನು ನಿಮಗೆ ತಿಳಿಸಿದ್ದೇವೆ. ನಮಗೆ ಹೊರಡಲು ಅಪ್ಪಣೆ ಕೊಡಿ ಎಂದು ಹೇಳಿ ಹೊರಟರಂತೆ. ಅಷ್ಟು ದೂರ ಪ್ರಯಾಣ ಮಾಡಿದ್ದ ಆ ಇಬ್ಬರೂ ಅದೇ ಊರಿನ ಬ್ರಾಹ್ಮಣನ ಮನೆಯಲ್ಲಿ ರಾತ್ರಿ ಉಳಿದುಕೊಳ್ಳಲೂ ನಿರ್ಧರಿಸಿದರಂತೆ. ಅದೇ ದಿನ ರಾತ್ರಿ, ರಾಜನ ಸ್ವಪ್ನದಲ್ಲಿ ಉಗ್ರವಾಗಿ ಕಾಣಿಸಿಕೊಂಡ ಸ್ವಾಮಿ, ತನ್ನ ಆಜ್ಞೆಯನ್ನು ತಿರಸ್ಕರಿಸಿದ ರಾಜನ ಮೇಲೆ ವ್ಯಗ್ರನಾದನಂತೆ.
ನೀನು ನನ್ನ ಆಣತಿ ತಿರಸ್ಕರಿಸಿರುವ ಫಲವಾಗಿ, ನಿನ್ನ ಖಜಾನೆ ಬರಿದಾಗಿ, ನಿನ್ನ ಪುತ್ರ, ಪೌತ್ರ ಕಳತ್ರಾದಿಗಳಿಗೆ ಕಷ್ಟ ಬರಲಿದೆ ಎಂದು ಎಚ್ಚರಿಸಿದನಂತೆ. ಕೂಡಲೇ ನಿದ್ದೆಯಿಂದೆದ್ದ ರಾಜನು ತನ್ನ ತಪ್ಪಿಗೆ ದೇವರ ಕ್ಷಮೆ ಕೋರಿ, ಆ ವರ್ತಕ ಮತ್ತು ಬ್ರಾಹ್ಮಣನನ್ನು ಹುಡುಕಿ ಕರೆಸಿ ಅವರೊಂದಿಗೇ ಘಾಟಿಯತ್ತ ಪ್ರಯಾಣ ಬೆಳೆಸಿದನಂತೆ.
ಆ ಕ್ಷೇತ್ರಕ್ಕೆ ಬಂದು ಮೂಲ ಸ್ವಾಮಿಯ ದರ್ಶನ ಪಡೆದು, ಸ್ವಾಮಿಯ ಆಣತಿಯಂತೆ ಗುಡಿ ಗೋಪುರ ಕಟ್ಟಿಸಿ, ಆ ಬ್ರಾಹ್ಮಣನನ್ನೇ ಪೂಜೆಗೆ ನೇಮಿಸಿದರಂತೆ. ಪೂಜಾದಿಗಳಿಗೆ ಭೂಮಿಯನ್ನು ದಾನವಾಗಿ ನೀಡಿದರಂತೆ. ಇಂದೂ ಅದೇ ಅರ್ಚಕರ ವಂಶಸ್ಥರು ಇಲ್ಲಿ ಪೂಜೆ ಮುಂದುವರಿಸಿ ಕೊಂಡು ಬಂದಿದ್ದಾರೆ.ಈ ಸ್ಥಳದಲ್ಲಿ ಮಹಾರಾಜರಿಗೆ ಹುತ್ತದಲ್ಲಿ ದೊರೆತ ಲಕ್ಷ್ಮೀನರಸಿಂಹ ಸಮೇತ ಸ್ವಾಮಿಯು ನೆಲೆಸಿದ್ದಾನೆ.
ಪೂರ್ವಾಭಿಮುಖನಾದ ಏಳು ಹೆಡೆಗಳ ಸುಬ್ರಹ್ಮಣ್ಯ ಸ್ವಾಮಿಯ ಎದುರು, ಪಶ್ಚಿಮಾಭಿಮುಖವಾಗಿರುವ ಲಕ್ಷ್ಮೀನರಸಿಂಹ ಸ್ವಾಮಿ ಮೂರ್ತಿಯಿದೆ. ಈ ಮೂರ್ತಿಯನ್ನು ದೊಡ್ಡ ಕನ್ನಡಿಯ ನೆರವಿನಿಂದ ದರ್ಶಿಸಬಹುದಾಗಿದೆ. ಇಲ್ಲಿ ಪ್ರತಿವರ್ಷ ಪುಷ್ಯ ಶುದ್ಧ ಷಷ್ಠಿಯಂದು ಬ್ರಹ್ಮ ರಥೋತ್ಸವ ಜರುಗುತ್ತದೆ. ಅನ್ನದಾನವೂ ನಡೆಯುತ್ತದೆ. ಪ್ರತಿನಿತ್ಯ ಮೂರು ಕಾಲ ದೀಪಾರಾಧನೆ ಮೊದಲಾದ ಕೈಂಕರ್ಯಗಳು ನಡೆಯುತ್ತವೆ. ಜಾತ್ರೆಯ ಸಮಯದಲ್ಲಿ ಇಲ್ಲಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಘಾಟಿಯ ದನಗಳ ಜಾತ್ರೆಯೂ ಬಹು ವಿಖ್ಯಾತವಾದುದು.