ಶ್ರಮದಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ಖಂಡಿತ ಎನ್ನುವುದಕ್ಕೆ ಈ ಸುಂದರ ಕಥೆಯೇ ಸಾಕ್ಷಿ.

0
4034

ಶ್ರಮಕ್ಕೆ ತಕ್ಕ ಪ್ರತಿಫಲ: ಜಾನಕಿ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಅವಳಿಗೆ ಒಬ್ಬನೇ ತಮ್ಮ ಅರವಿಂದ. ಪದವಿ ಮುಗಿಸಿ ಕೆಲಸಕ್ಕಾಗಿ ಅಲೆದು ಕೈಚೆಲ್ಲಿ ಕುಳಿತಿದ್ದಾನೆ. ತಂದೆ ಕಟ್ಟಿದ ಚಿಕ್ಕ ಮನೆ ಬಿಟ್ಟು ಬೇರೆ ಆಸ್ತಿ ಇಲ್ಲ. ಈ ಕುಟುಂಬದಲ್ಲಿ ಇವರಿಬ್ಬರು ಬಿಟ್ಟರೆ ಬೇರೆ ಯಾರು ಇಲ್ಲ. ಬಡತನವಿರುವಲ್ಲಿ ಬಂಧುಬಳಗ ದೂರವೇ. ಜಾನಕಿಗೆ ಸಿಗುವ ಸಂಬಳವೂ ಕಡಿಮೆ. ಹಾಗಂತ ಬಿಟ್ಟರೆ ಅದೂ ಇಲ್ಲ.

ಹೇಗೋ ಅಕ್ಕ ತಮ್ಮ ಇದ್ದುದರಲ್ಲಿ ತೃಪ್ತಿಯಿಂದ ಇದ್ದರು. ಆದರೆ ಈಗ ತಮ್ಮನಿಗೆ ಕೆಲಸವಿಲ್ಲದೆ ಪರದಾಡುವುದನ್ನು ಕಂಡು ಜಾನಕಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಜಾನಕಿಗೆ ಮದುವೆ ವಯಸ್ಸು ಮೀರಿದೆ. ಕಾರಣ ಗಂಡು ನೋಡುವವರು, ಜವಾಬ್ದಾರಿಯಿಂದ ನಿಂತು ಮದುವೆ ಮಾಡುವವರು ಅಂತ ಯಾರು ಇಲ್ಲ. ಇನ್ನು ಪ್ರೀತಿ ಪ್ರೇಮ ಅಂತ ಮುನ್ನುಗ್ಗವ ಸ್ವಭಾವಂತೂ ಅಲ್ಲವೇ ಅಲ್ಲ. ಅಲ್ಲದೆ ಜಾನಕಿ ಮರ್ಯಾದೆಗೆ ಅಂಜುತ್ತಿದ್ದಳು.

ಹೀಗಿರುವಾಗ ತಮ್ಮನಿಗೂ ವಯಸ್ಸು ಕಡಿಮೆಯಲ್ಲ. ಹತ್ತಿರ ಹತ್ತಿರ 30, ಆಗಿದೆ. ಕೆಲಸ ಅನ್ನುವುದು ಭೂತಾಕಾರವಾಗಿ ಕಾಡುತ್ತಿದೆ. ಹಾಗೂ ಹೀಗೂ ಯೋಚಿಸಿ ಸ್ವಲ್ಪ ಸಾಲ ಮಾಡಿ ತಮ್ಮನಿಗೆ ಸೆಕೆಂಡ್ಹ್ಯಾಂಡ್ ಮೆಟಡೋರ್ ಕೊಡಿಸಿದಳು. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಬಿಟ್ಟು ಬರುವುದು, ಯಾರಾದರೂ ಕೇಳಿದರೆ ಒಂದು ಕುಟುಂಬದ ಪ್ರವಾಸ, ಕ್ಯಾಟರಿಂಗ್ ಕೊಟ್ಟು ಬರುವುದು, ಹೀಗೆ ಹಲವು ಉದ್ದೇಶಗಳನ್ನು ಇಟ್ಟುಕೊಂಡು ಕೊಡಿಸಿದಳು.

‘ಮೆಟಡೋರ್ ‘ಕೊಡಿಸಿದ್ದೋಂದೆ ಭಗವಂತನ ದಯೆ ಎಂಬಂತೆ, ತಿರುಗಿ ನೋಡುವಂಥ ಪ್ರಸಂಗ ಬರಲಿಲ್ಲ. ಒಂದೆರಡು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಯಿತು. ಹಣಕಾಸು ಕೈ ಸೇರಿತು. ಇರುವ ಮನೆಯನ್ನು ರಿಪೇರಿ ಮಾಡಿಸಿದರು. ಒಳ್ಳೆಯ ಬಟ್ಟೆ ಬರೆಗಳಾಯಿತು. ಅರವಿಂದನೇ ಖುದ್ದಾಗಿ ಅಕ್ಕನಿಗೆ ಗಂಡು ಹುಡುಕಿದ. ಸ್ವಂತ ಹೋಟೆಲ್ ನಡೆಸುತ್ತಿದ್ದ ರಾಜಶೇಖರ ಎಂಬ ಹುಡುಗನಿಗೆ ಕೊಟ್ಟು ಸರಳವಾಗಿ ಮದುವೆ ಮಾಡಿದ.

ಜಾನಕಿ ತಮ್ಮನಿಗಾಗಿ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬಡ ಕುಟುಂಬದಿಂದ ಬಂದ ಭವಾನಿ ಎಂಬ ಹುಡುಗಿಯನ್ನ ಹುಡುಕಿ ಮುಂದೆ ನಿಂತು ಮದುವೆ ಮಾಡಿದರು. ಅಂತೂ ಇಂತೂ ದೇವರು ಕಣ್ಣುಬಿಟ್ಟು ನೋಡಿದ. ಎರಡೂ ಕುಟುಂಬದಲ್ಲಿ ನೆಮ್ಮದಿ ಸಂತೋಷ ಸಿಕ್ಕಿತು. ಇಬ್ಬರಿಗೂ ಒಂದೊಂದು ಮಗುವಾಯಿತು. ಕಷ್ಟಗಳೆಲ್ಲ ಏನು ಮಹಾ ಸ್ವಲ್ಪ ಕಾಯಬೇಕು, ಎಂಬ ನಂಬಿಕೆ ಮನಸ್ಸಿನಲ್ಲಿ ಬೇರೂರಿತು.

ನಾಲ್ಕಾರು ವರ್ಷಗಳಾಯಿತು. ಇದ್ದಕ್ಕಿದ್ದಂತೆ ‘ಕರೋನಾ’ ಎಂಬ ಮಹಾ ಪೀ’ಡೆ ವಕ್ಕರಿಸಿತು. ಶಾಲೆಗಳು ಮುಚ್ಚಿದವು. ಹೋಟೆಲ್ ವ್ಯಾಪಾರ ಪೂರ್ತಿ ನಿಂತಿತು. ಗಾರ್ಮೆಂಟ್ ಫ್ಯಾಕ್ಟರಿಗಳೆಲ್ಲ ಮುಚ್ಚಿದವು. ಇರೋ ಕೆಲಸವೂ ಹೋಯಿತು. ಸಂಬಳವಿಲ್ಲ. ಮೂರು ತಿಂಗಳು ಹೇಗೋ ಕತೆ ದಬ್ಬಿದರು. ಅದರಾಚೆಗೆ ಸಾಧ್ಯವೇ ಇಲ್ಲ ಎಂಬಂತಾಯಿತು. ತಲೆಯ ಮೇಲೆ ಕೈ ಹೊತ್ತು ಕುಳಿತರು. ಬಾಡಿಗೆ ಕೊಡಲು ಆಗದೇ ಇರುವ ಸಣ್ಣ ಸ್ವಂತ ಮನೆಯಲ್ಲಿ ಎಲ್ಲರೂ ಒಂದೇ ಕಡೆ ಇರುವಂತಾಯಿತು. ಮೆಟಡೋರ್ ಕೆಲಸವಿಲ್ಲದೆ ಮನೆ ಮುಂದೆ ನಿಂತಿತು.

ಇನ್ನೇನು ಬದುಕೇ ಮುಗಿಯಿತು ಎಂದುಕೊಂಡಿರುವಾಗ ಜಾನಕಿ ಒಂದು ಸಲಹೆ ಕೊಟ್ಟಳು. ನಾವಿರುವುದು ಸಣ್ಣ ತಾಲೂಕು, ಸುತ್ತಮುತ್ತ ಪೇಟೆ ಪಟ್ಟಣಗಳಿವೆ. ಮನೆಯ ಹಿಂದುಗಡೆ ಅಂಗಳದಲ್ಲಿ ಮರೆಮಾಡಿ ಕಲ್ಲು ಒಲೆ ಹೂಡಿ, ಪಾನಿಪುರಿ, ಖಾರಾ-ಮಂಡಕ್ಕಿ ,ಬೇಲ್ ಪುರಿ, ತಯಾರು ಮಾಡಿ ಮೆಟಡೋರ್ ನಲ್ಲಿ ಇಟ್ಟುಕೊಂಡು ಪಾರ್ಸಲ್ ಕೊಡೋಣ. ಕುರ್ಚಿ, ಟೇಬಲ್ಲು ಬೇಡ. ಆಗ ಜಾಗವು ಸ್ವಚ್ಛವಾಗಿರುತ್ತದೆ.

ಜನಗಳು ಸೇರುವುದಿಲ್ಲ. ಎಲ್ಲರೂ ಇಷ್ಟಪಡುತ್ತಾರೆ ಎಂಬ ಸಲಹೆಗೆ ಒಪ್ಪಿಗೆಯಾಗಿ ಕೆಲಸ ಆರಂಭಿಸಿದರು. ಜಾನಕಿ ಗಂಡ ರಾಜಶೇಖರನಿಗೆ ಹೋಟೆಲ್ ನಡೆಸುವ ಅನುಭವ ಇದೆ. ಮನೆಯವರೆಲ್ಲ ಒಗ್ಗಟ್ಟಾಗಿ ದುಡಿದರು. ಶುಚಿ ರುಚಿಯಾಗಿ ಇರುವಂತೆ ನೋಡಿಕೊಂಡರು. ಮೊದಮೊದಲು ಸ್ವಲ್ಪ ಕಷ್ಟ ಎನಿಸಿದರೂ, ಕ್ರಮೇಣ ಒಂದಕ್ಕೊಂದು ಕೈ ಹಿಡಿಯಿತು. ಉತ್ಸಾಹ ಹೆಚ್ಚಿತು.

ಹೆಂಗಸರು ಮಕ್ಕಳು, ದೊಡ್ಡವರು, ಎಲ್ಲರಿಗೂ ತುಂಬಾ ಇಷ್ಟವಾಯಿತು. ಊರಿನವರು, ಹಾಗೂ ಸುತ್ತಮುತ್ತ ಪೇಟೆ, ಪಟ್ಟಣದವರು ಬಂದು ತೆಗೆದುಕೊಂಡು ಹೋಗಲು ಶುರು ಮಾಡಿದರು. ಬಿಡುವಿಲ್ಲದಷ್ಟು ವ್ಯಾಪಾರ ನಡೆಯಿತು. ಮತ್ತೆ ಜೀವನ ಸರಾಗವಾಗಿ ಮುಂದುವರೆಯಿತು. ಕುಟುಂಬದಲ್ಲಿ ನೆಮ್ಮದಿ ಸಂತೋಷ ನೆಲೆಸಿತು. ಅಕ್ಕ, ತಮ್ಮನ ಶ್ರಮಕ್ಕೆ ಫಲ ಸಿಕ್ಕಿತು.

LEAVE A REPLY

Please enter your comment!
Please enter your name here