ಶ್ರಾವಣಮಾಸದಲ್ಲಿ ಬರುವ ಹಬ್ಬಗಳ ಸಂಪೂರ್ಣ ವಿವರ ಇಲ್ಲಿದೆ.

0
3596

ಶ್ರಾವಣ ಮಾಸ ಆರಂಭ. 09-08-2021 ಸೋಮವಾರ. ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ದೇವಾಸುರರು ಸಮುದ್ರ ಮಂಥನ ಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಶ್ರೀ ಲಕ್ಷ್ಮಿಯೂ ಸೇರಿದಂತೆ ಚತುರ್ದಶ ರತ್ನಗಳು ಉದ್ಭವಿಸಿ ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ ಎಲ್ಲ ನೇಮಗಳೂ ಸಮೃದ್ಧಿಕಾರಕ ಎನ್ನಲಾಗುತ್ತದೆ.

ಸನಾತನ ಧರ್ಮದಲ್ಲಿನ ವ್ರತ ಹಾಗೂ ಉತ್ಸವಗಳು ಋತು, ಪ್ರಕೃತಿ, ಕುಲ, ವೃತ್ತಿ ಹಾಗೂ ಪ್ರಾದೇಶಿಕ ಪ್ರಭಾವಗಳನ್ನು ಮೈದಾಳಿ ಬರುವಂತಹವು. ವರ್ಷಾಋತುವಿನಲ್ಲಿ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆ ದೂರವಿರಿಸುವ ಸಲುವಾಗಿ ಶ್ರಾವಣದ ಹಬ್ಬಗಳಲ್ಲಿ ಉಪವಾಸ, ಪೂಜೆ, ಜಪ, ದಾನ, ಧ್ಯಾನ ಮುಂತಾದ ವ್ರತಾಂಶಗಳೇ ಹೆಚ್ಚು.

ಶ್ರಾವಣ ಮಾಸದಹಬ್ಬಆಚರಣೆಗಳು. ಶ್ರಾವಣಮಾಸದಲ್ಲಿ ಹಬ್ಬಗಳು ಒಂದಾದ ಮೇಲೊಂದು ಸಾಲು ಸಾಲಾಗಿ ಬರುತ್ತವೆ. ಶ್ರಾವಣ ಮಾಸವನ್ನು “ಹಬ್ಬಗಳ ಮಾಸ“ ಎಂದು ಕರೆಯುವುದುಂಟು. ಶ್ರಾವಣ ಮಾಸ ಬಂತೆಂದರೆ ಎಲ್ಲರ ಮನೆಗಳಲ್ಲಿ ಸಡಗರವೋ ಸಡಗರ. ಎಲ್ಲ ದೇವ – ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ನಮ್ಮ ಸಂಪ್ರದಾಯ, ಸಂಸ್ಕೃತಿ ಪ್ರತಿಬಿಂಬಿತವಾಗುತ್ತದೆ.

ಶ್ರಾವಣಮಾಸದಲ್ಲಿ ಮಂಗಳಗೌರಿ ವ್ರತ, ನಾಗರ ಪಂಚಮಿ, ನಾಗರ ಷಷ್ಠಿ, ಶ್ರಾವಣ ಶುಕ್ರವಾರಗಳು, ಶ್ರಾವಣ ಶನಿವಾರಗಳು, ವರಮಹಾಲಕ್ಷ್ಮಿ ವ್ರತ, ರಕ್ಷಾಬಂಧನ, ಶ್ರೀ ಕೃಷ್ಣ ಜನ್ಮಾಷ್ಟಮಿ, ಫಲಗೌರಿ ವ್ರತ ಹೀಗೆ ಹಲವು ಹಬ್ಬಗಳ ಸಾಲು ಸಾಲು ಇವೆ.

ಮಂಗಳಗೌರಿ ವ್ರತ : ಶ್ರಾವಣ ಮಾಸದಲ್ಲಿ ಬರುವ ಮಂಗಳವಾರದಂದು ಆಚರಿಸುವ ವ್ರತವೇ ಈ ಮಂಗಳಗೌರಿ ವ್ರತ. ಶ್ರಾವಣ ಮಂಗಳ ಗೌರಿ ವ್ರತವು ತುಂಬಾ ಶುಭಪ್ರದವಾದುದು, ಮಂಗಳಕರವಾದುದು. ಈ ವ್ರತವನ್ನು ಸಕಲ ಭೋಗ ಭಾಗ್ಯ, ಸಕಲ ಸಂಪತ್ತನ್ನು, ಸುಮಂಗಲಿತನವನ್ನು ಪಡೆಯಲು ಆಚರಿಸುತ್ತಾರೆ. ವ್ರತಾಚರಣೆಯಿಂದ ಪತಿಗೆ ಆಯುಸ್ಸು ವೃದ್ಧಿಯಾಗಿ ಕೀರ್ತಿಯು ಲಭಿಸುತ್ತದೆ.

ವ್ರತ ಶುರುಮಾಡಿದ ನಂತರ ತಪ್ಪದೆ ಐದು ವರ್ಷಗಳು ಆಚರಿಸಬೇಕು. ಮುತ್ತೈದೆಯರು ಮಾತ್ರವೇ ಅಲ್ಲದೆ ಕನ್ನಿಕೆಯರು ಕೂಡ ನಾಲ್ಕು ವರ್ಷಗಳ ಕಾಲ ಆಚರಿಸಿ ಒಂದು ವರ್ಷ ಮದುವೆಯಾದ ಮೇಲೆ ವ್ರತ ಆಚರಿಸಬಹುದಾಗಿದೆ. ಈ ವ್ರತವನ್ನು ಆಚರಿಸಿ ನಂತರ ಐದು ಜನ ಮುತ್ತೈದೆಯರಿಗೆ ಬಾಗಿನ ಕೊಡಬೇಕು.

ನಾಗರ ಪಂಚಮಿ 13-08-2021 ಶುಕ್ರವಾರ : ಈ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷ ಪಂಚಮಿ ದಿನದಂದು ಆಚರಿಸುವರು. ಈ ದಿನ ಮೂಲ ನಾಗಬನದಲ್ಲಿ ಮನೆಯ ಸಮೀಪದ ನಾಗಬನಗಳಲ್ಲಿ ನಂಬಿಕೊಂಡು ಬಂದ ನಾಗಬನಗಳಲ್ಲಿ ನಾಗ ದೇವರಿಗೆ ಹಾಲೆರೆದು ಪೂಜೆ ಮಾಡಿ, ನಾಗಾನುಗ್ರಹವನ್ನು ಪಡೆಯುತ್ತಾರೆ

ಶ್ರಾವಣ ಶುಕ್ರವಾರ : ಶ್ರಾವಣ ಮಾಸದಲ್ಲಿ ಬರುವ ಪ್ರತೀ ಶುಕ್ರವಾರದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಿ ಲಕ್ಷ್ಮಿಗೆ ಇಷ್ಟವಾದ ಕಡಲೇಕಾಳು ನೈವೇದ್ಯ ಮಾಡಿ ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯದಲ್ಲೂ ಲಕ್ಷ್ಮೀದೇವಿಗೆ ಆರತಿ ಮಾಡುವರು. ವರಮಹಾಲಕ್ಷ್ಮಿ ವ್ರತವನ್ನ ಹುಣ್ಣಿಮೆಯ ಹತ್ತಿರದ ಶುಕ್ರವಾರದಲ್ಲಿ ಆಚರಿಸುವರು.

ಶ್ರಾವಣ ಶನಿವಾರ : ಶ್ರಾವಣ ಶನಿವಾರಗಳಲ್ಲಿ ವಿಶೇಷವಾಗಿ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸುವರು. ಮನೆಯ ಹಿರಿಯರು ಕುಲದೇವರಿಗೆ ತಿರುಪತಿಯ ವೆಂಕಟರಮಣನಿಗೆ ಕಾಣಿಕೆ ತೆಗೆದಿಟ್ಟು; ಕಾಶಿ ಅಥವಾ ಕಾವೇರಿ ಇನ್ನಿತರ ಪುಣ್ಯಕ್ಷೇತ್ರಗಳಿಗೆ ಹೋಗಿ ಬಂದ ನೆನಪಿಗಾಗಿ ಕಾಶಿ ಸಮಾರಾಧನೆ ಕಾವೇರಿ ಸಮಾರಾಧನೆ ಮೊದಲಾಗಿ ಬ್ರಾಹ್ಮಣ ಸಂತರ್ಪಣೆ ಮಾಡುವುದು ಈ ದಿನದ ವಿಶೇಷ.

ರಕ್ಷಾ ಬಂಧನ 22-08-2021 ಭಾನುವಾರ: ಇದನ್ನು ರಾಕಿ ಹಬ್ಬ ಎಂದು ಕರೆಯುವರು. ಈ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸುವರು ಇದು ಅಣ್ಣ-ತಂಗಿಯರ ಹಬ್ಬ. ರಕ್ಷಾ ಎಂದರೆ ರಕ್ಷಣೆ. ತಂಗಿಯು ಅಣ್ಣನಿಗೆ ರಕ್ಷೆ (ರಾಖಿ) ಕಟ್ಟಿದರೆ ಅಣ್ಣ – ತಂಗಿಯ ರಕ್ಷಣೆ ಮಾಡುವನು ಎಂಬ ಪ್ರತೀತಿ. ಅಣ್ಣನು ಏನಾದರೂ ಕಾಣಿಕೆಯನ್ನು ತಂಗಿಗೆ ನೀಡುವನು.

ವರಮಹಾಲಕ್ಷ್ಮಿ ವ್ರತ 20-08-2021 ಶುಕ್ರವಾರ : ಇದನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಆಚರಿಸುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಅಂದರೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸಲಾಗುವುದು. ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ವರಮಹಾಲಕ್ಷ್ಮಿಯ ವ್ರತವಿದು. ಈ ವ್ರತವನ್ನು ಈ ದಿನ ಮಾಡಲಾಗದಿದ್ದರೂ ಶ್ರಾವಣ ಮಾಸದ ಮೂರನೆಯ ಅಥವಾ ನಾಲ್ಕನೆಯ ಶುಕ್ರವಾರಗಳು ಆಚರಿಸಬಹುದು.

ಪೂರ್ವಕಾಲದಲ್ಲಿ ವಿದರ್ಭ ದೇಶದ ರಾಜಧಾನಿ ಕುಂಡಿನ ನಗರದಲ್ಲಿ ಪತಿವ್ರತೆಯೂ, ಸದಾಚಾರ ಸಂಪನ್ನಳು, ದರಿದ್ರಳು ಆದ ಚಾರುಮತಿ ಎಂಬ ಸ್ತ್ರೀ ಇದ್ದಳು. ಚಾರುಮತಿ ನಿದ್ರೆಯಲ್ಲಿದ್ದಾಗ ಶ್ರೀ ಮಹಾಲಕ್ಷ್ಮಿಯು ಬಂದು “ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವಕಾಲದ ಪುಣ್ಯ ಅನುಸಾರವಾಗಿ ನಿನಗೆ ಅನುಗ್ರಹ ನೀಡಲು ಬಂದಿರುವೆ ಎಂದಳು” ಶ್ರಾವಣ ಮಾಸದ ಎರಡನೇ ಶುಕ್ರವಾರ ದಿನ ಪ್ರದೋಷ ಸಮಯಕ್ಕೆ ನನ್ನನ್ನು ಪೂಜೆ ಮಾಡು ನಿನ್ನ ದಾರಿದ್ರ್ಯವನ್ನು ನೀಗಿಸಿ ಅಷ್ಟೈಶ್ವರ್ಯವನ್ನು ಕೊಡುತ್ತೇನೆಂದು ಹೇಳಿ ಕಣ್ಮರೆಯಾದಳು.

ಮರುದಿನ ಚಾರುಮತಿಯು ಮನೆಯವರೊಂದಿಗೆ ಈ ವಿಷಯವನ್ನು ಹೇಳಿ ಶ್ರಾವಣ ಮಾಸದ ಎರಡನೇ ಶುಕ್ರವಾರಕ್ಕಾಗಿ ಕಾದು, ದಿನ ಮಹಾಲಕ್ಷ್ಮಿಯ ಪೂಜೆ ಮಾಡಿದಳು. ದರಿದ್ರಳಾಗಿದ್ದ ಚಾರುಮತಿಯು ಅಷ್ಟೈಶ್ವರ್ಯ ಪಡೆದು ಪುತ್ರಪೌತ್ರಾದಿಗಳಿಂದ ಕೂಡಿ ಸುಖದಿಂದ ಇದ್ದಳು. ಅಂದಿನಿಂದ ವರಮಹಾಲಕ್ಷ್ಮಿ ವ್ರತವು ಆಚರಣೆಗೆ ಬಂದಿತು.

21-08-2021 ಶನಿವಾರ ಋಗುಪಾಕರ್ಮ. 22-08-2021 ಭಾನುವಾರ ಯಜುರುಪಾಕರ್ಮ. ಉಪಾಕರ್ಮ ಎಂದರೆ ಉಪಾನೀತರಾದವರು ವೇದಾಧ್ಯಯನವನ್ನು ಪ್ರಾರಂಭಿಸಲು ಮಾಡುವ ಒಂದು ವಿಶೇಷ ಸಂಸ್ಕಾರ. ಇದನ್ನು ಋಗ್ವೇದವನ್ನು ಆಚರಿಸುವವರು ಶ್ರಾವಣ ಮಾಸದ ಶ್ರವಣ ನಕ್ಷತ್ರದಂದು ಆಚರಿಸಲಾಗುವುದು.

ಈ ದಿನ ಪೂಜೆ ಮಾಡಿ ಜನಿವಾರವನ್ನು ಧರಿಸಲಾಗುವುದು, ಈ ಜನಿವಾರ ಪ್ರಣವ-ಓಂಕಾರ ಸೂಚಿಸುತ್ತದೆ. ಇದರಲ್ಲಿರುವ 3 ಸೂಕ್ಷ್ಮ ವಾದ ಎಳೆಗಳು ಮೂರು ವೇದಗಳ ಕುರಿತು ಸೂಚಿಸುತ್ತದೆ. ಬ್ರಹ್ಮಚಾರಿಗಳು 3 ಎಳೆಗಳ ಜನಿವಾರ ಧರಿಸದರೆ, ಗೃಹಸ್ಥರು 6 ಎಳೆಗಳ ಜನಿವಾರ ಧರಿಸುತ್ತಾರೆ. ಗೃಹಸ್ಥರು ಧರಿಸುವ ಹೆಚ್ಚಿನ 3 ಎಳೆಗಳು ಭಕ್ತಿ, ಜ್ಞಾನ, ಕರ್ಮಗಳ ಪಾವಿತ್ರ್ಯತೆಯ ಸಂಕೇತವಾಗಿದೆ. ಸಾಧಕರು 9 ಎಳೆಗಳ ಜನಿವಾರ ಧರಿಸುತ್ತಾರೆ, ಅವು ಅವರ ಸಾಧನೆಯ ಸೋಪಾನವಾದ ಸತ್, ಚಿತ್, ಆನಂದ ಎಂಬ ಮೂರು ಸ್ಥತಿಯನ್ನು ಸೂಚಿಸುತ್ತದೆ.

ಈ ದಿನ ಗಾಯತ್ರಿ ಮಂತ್ರಕ್ಕೆ ಹೊಸ ಸಿದ್ಧಿಯನ್ನು ಪಡೆದುಕೊಳ್ಳುವ ಸಂಕಲ್ಪ ಮಾಡಬೇಕು. ಈ ಜಪವನ್ನು ಆವರ್ತನೆಯಂತೆ ವಿದ್ಯೆ, ಸಿದ್ಧಿ, ಸಂತಾನ, ಕೀರ್ತಿ, ಲಾಭ, ಬ್ರಹ್ಮತೇಜಸ್ಸು, ವೈರಾಗ್ಯಗಳನ್ನು ಗಳಿಸಲು ವಿನಿಯೋಗಿಸಬೇಕು ಎಂದ ಹೇಳಲಾಗಿದೆ. ಈ ಮಂತ್ರವನ್ನು ಆತ್ಮಕಲ್ಯಾಣಕ್ಕೂ, ಲೋಕಕಲ್ಯಾಣಕ್ಕೂ ಬಳಸಬಹುದು.

ಈ ದಿನದಂದು ಲೋಕಮಾತೆಯಾಗಿ ಗಾಯತ್ರಿಯನ್ನು ಆರಾಧಿಸಿ, ಜ್ಞಾನವನ್ನು ನೀಡುವಂತೆ ಪ್ರಾರ್ಥಿಸಲಾಗುವುದು.

ಉಪಾಕರ್ಮ ಆಚರಣೆ : ಉಪಾಕರ್ಮ ಆಚರಣೆ ಶಾಸ್ತ್ರೀಯ ಕಟ್ಟುಪಾಡಿನಲ್ಲಿ ನಡೆಯುವ ವಾರ್ಷಿಕ ವಿಧಿ. ಸಂವತ್ಸರ ಕೃತ ದೋಷ ಪರಿಹಾರಾರ್ಥ ಅಂದರೆ ವರ್ಷವಿಡೀ ತಿಳಿದೋ, ತಿಳಿಯದೆಯೋ ಆದ ತಪ್ಪಿಗೆ ದೇವರ ಕ್ಷಮೆ ಕೋರಿ, ಅದರಿಂದ ಕಟ್ಟಿಕೊಂಡ ಪಾಪ ನಿವಾರಣೆಗಾಗಿ ವರ್ಷಕ್ಕೊಮ್ಮೆ ಈ ಆಚರಣೆ ಮಾಡಲಾಗುತ್ತದೆ.

ಉಪಾಕರ್ಮದ ದಿನ ಅಭ್ಯಂಜನ ಮಾಡಿ, ಪುಣ್ಯಾಹ, ನಾಂದಿ ನಂತರ ಉತ್ಸರ್ಜನ ಹೋಮ ಮಾಡಿ, ಗುರು(ಋಷಿ) ಕಾಣಿಕೆ ನೀಡಿ ಜನಿವಾರ ಅರ್ಥಾತ್‌ ಯಜ್ಞೋಪವೀತ ಧಾರಣೆಯನ್ನು ಮಾಡಿಕೊಳ್ಳುವುದು ಸಂಪ್ರದಾಯ. ಉತ್ಸರ್ಜನ ಎಂದರೆ, ದೇಶ ಶುದ್ಧಿ. ಅಂದರೆ ದೇಹ ಶುದ್ಧಿಗಾಗಿ ಮಾಡುವ ಹೋಮ ಉತ್ಸರ್ಜನ. ಈ ಹೋಮ ಅಥವಾ ಯಾಗ ಮಾಡುವುದರಿಂದ ವರ್ಷವಿಡೀ ಮಾಡಿದ ಗಾಯಿತ್ರಿ ಮಂತ್ರ ಜಪ, ಪೂಜೆ, ಸಂಧ್ಯಾವಂದನೆಗೆ ಬಲ ಬರುತ್ತದೆ.

ಕೃಷ್ಣ ಜಯಂತಿ( ಜನ್ಮಾಷ್ಟಮಿ) 30-08-2021(ಈ ಸಂವತ್ಸರದಲ್ಲಿ ಅಷ್ಟಮಿಯಂದು ರೋಹಿಣಿ ನಕ್ಷತ್ರ ಬಂದಿರುವುದರಿಂದ ಕೃಷ್ಣ ಜಯಂತಿ ಎನಿಸಿದೆ ) : ದೇವಕಿ ಮತ್ತು ವಸುದೇವನ ಪುತ್ರನಾದ ಶ್ರೀ ಕೃಷ್ಣನು ಹುಟ್ಟಿದ ದಿವಸವನ್ನು ಶ್ರೀ ಕೃಷ್ಣಾಷ್ಟಮಿ ಎಂದು ಆಚರಿಸುತ್ತಾರೆ. ಇದು ವಿಷ್ಣುವಿನ ಎಂಟನೇ ಅವತಾರ. ಈ ಈ ಹಬ್ಬವನ್ನು ಗೋಕುಲಾಷ್ಟಮಿ, ಶ್ರೀಕೃಷ್ಣ ಜಯಂತಿ ಎಂದು ಕರೆಯುವರು.

ವೈಷ್ಣವರಿಗೆ ಇದು ತುಂಬಾ ಮುಖ್ಯವಾದ ಹಬ್ಬ. ಮಥುರಾ ವೃಂದಾವನದಲ್ಲಿ ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುವರು. ಈ ದಿನ ಶ್ರೀ ಕೃಷ್ಣನ ಪೂಜೆ ಮಾಡಿ ಕೃಷ್ಣನಿಗೆ ಅತ್ಯಂತ ಪ್ರಿಯವಾದ ಉಂಡೆ ಅವಲಕ್ಕಿಯನ್ನು ನೈವೇದ್ಯ ಮಾಡಿ ಉಪವಾಸವಿದ್ದು ತುಳಸಿಯಿಂದ ಅಷ್ಟೋತ್ತರ ಸಹಸ್ರನಾಮಗಳಿಂದ ಕೃಷ್ಣನನ್ನ ಪೂಜಿಸುವುದು ಈ ದಿನದ ವಿಶೇಷ.

ಇನ್ನೂ ಹಲವಾರು ಹಬ್ಬಗಳನ್ನು ಈ ಮಾಸದಲ್ಲಿ ಆಚರಿಸಲಾಗುತ್ತದೆ. ಲೋಕಾ ಸಮಸ್ತಾಃ ಸುಖಿನೋಭವಂತು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here