ಆಂಜನೇಯ ತನ್ನ ಗುರುವಾದ ಸೂರ್ಯದೇವನಿಂದ ವಿದ್ಯೆ ಕಲಿತ ಸ್ಥಳ ಇದು. ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸ್ಥಳ.

0
3581

ತಿಮ್ಮಪ್ಪನನ್ನು ನೋಡಲು ಆಂಧ್ರಕ್ಕೆ ಹೋಗ್ತಿವಿ, ಸಾಯಿಬಾಬಾ ನೋಡಲು ಮಹಾರಾಷ್ಟ್ರಕ್ಕೆ ಹೋಗ್ತಿವಿ, ಕಾಶಿ ವಿಶ್ವನಾಥನ ನೋಡಲು ಉತ್ತರ ಪ್ರದೇಶಕ್ಕೆ ಹೋಗ್ತಿವಿ. ಕಂಚಿ ಕಾಮಾಕ್ಷಿ (ಪಾರ್ವತಿ) ನೋಡಲು ಚೆನೈಗೆ ಹೊಗ್ತಿವಿ. ಹಾಗೆ ಕರ್ನಾಟಕದಲ್ಲಿರುವ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಮತ್ತು ಆಂಜನೇಯ ತನ್ನ ಗುರುವಾದ ಸೂರ್ಯದೇವನಿಂದ ವಿದ್ಯೆ ಕಲಿತ ಸ್ಥಳ ಸೂರ್ಯಪುರ ಕೂಡ ಆಗಬೇಕು, ದೇಶದ ಎಲ್ಲ ರಾಜ್ಯಗಳ ಹನುಮನ ಭಕ್ತರು ಮತ್ತು ಸೂರ್ಯನ ಭಕ್ತರು ಸೂರ್ಯಪುರಕ್ಕೆ ಬರಬೇಕು.

ನಮ್ಮ ಬೇರೆ ಬೇರೆ ರಾಜ್ಯದ ಬಹಳಷ್ಟು ಜನಕ್ಕೆ ಪುರಾಣ ಪ್ರಸಿದ್ದ ಐತಿಹಾಸಿಕ ಪುಣ್ಯಕ್ಷೇತ್ರ ಸೂರ್ಯಪುರದ ಬಗ್ಗೆ ಗೊತ್ತಿಲ್ಲ, ಆಂಜನೇಯನು ವಿದ್ಯೆ ಕಲಿತ ಸ್ಥಳ ಸೂರ್ಯಪುರ ಎಲ್ಲರಿಗೂ ತಿಳಿಯುವಂತಹ ಕೆಲಸ ಆಗಬೇಕು, ರಾಜ್ಯ ಸರ್ಕಾರ, ಪ್ರವಾಸೋದ್ಯಮ ಇಲಾಖೆ, ಮುಜರಾಯಿ ಇಲಾಖೆ ಸ್ವಲ್ಪ ಇದರ ಬಗ್ಗೆ ಗಮನಹರಿಸಬೇಕು. ದೇಶದೆಲ್ಲೆಡೆಯಿಂದ ಭಕ್ತರು ಬರುವಂತಾಗಲಿ. ಋಷಿ ಮುನಿಗಳು ತಪ್ಪಸ್ಸುಗೈದ ಸ್ಥಳವಾಗಿದ್ದ ಸೂರ್ಯಪುರ, ವಿಜಯನಗರ ಸಾಮ್ರಾಜ್ಯದ ಪತನಾ ನಂತರ ತನ್ನ ಭವ್ಯತೆಯನ್ನು ಕಳೆದುಕೊಂಡಿತು.

ಸೂರ್ಯಪುರ (ರಾಯಪುರ) ಗ್ರಾಮದ ಮನೆಯೊಳಗಿನ ಒಲೆಯೊಂದರಲ್ಲಿ ಹುಣಸೆ ಗಿಡ ಹುಟ್ಟಿದಾಗ ಅದು ಅಪಶಕುನ ಎಂದು ಜನರು ಈ ಗ್ರಾಮವನ್ನೆ ಖಾಲಿ ಮಾಡಿ ಬೇರೆ ಪ್ರದೇಶಗಳಿಗೆ ವಲಸೆ ಹೋಗಿ ನೆಲೆಸಿದ್ದಾರೆ. ಈಗಲೂ ಕೂಡ ಆಗಾಗ್ಗೆ ರಾತ್ರಿ ಸಮಯದಲ್ಲಿ (ಋಷಿಮುನಿಗಳ ಸಂಚಾರ) ಜ್ಯೋತಿ (ಬೆಳಕು) ಸಂಚರಿಸುತ್ತಿರುವುದನ್ನು ನೋಡುತ್ತಿರುವುದಾಗಿ ಅರ್ಚಕರ ಕುಟುಂಬದವರು ತಿಳಿಸುತ್ತಾರೆ.

ಇತ್ತೀಚೆಗೆ ಅಳಿದುಳಿದ ಈ ಗ್ರಾಮದ ದೇವಾಲಯಗಳನ್ನು ಸೂರ್ಯಪುರ ಆಶ್ರಮ (ಮಠ)ದ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಸೂರ್ಯನಿಗೆ ಪ್ರಿಯವಾದ ವಾರ ಭಾನುವಾರ. ಆಂಜನೇಯನಿಗೆ ಮಂಗಳವಾರ ಮತ್ತು ಶನಿವಾರ ಹೀಗಾಗಿ ಭಾನುವಾರ, ಮಂಗಳವಾರ ಮತ್ತು ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.

ಶ್ರೀ ಸೂರ್ಯಾಂಜನೇಯ ಸ್ವಾಮಿಗೆ ಭಕ್ತರು ಹರಕೆ ರೂಪದಲ್ಲಿ ಮುಡಿ (ಮಂಡೆ) ಕೊಡುತ್ತಾರೆ. ಸುಮೇರು ಪ್ರಾಂತ್ಯದ ರಾಜ ಕೇಸರಿ ಮಹಾರಾಜ ಮತ್ತು ಅಂಜನಾದೇವಿಯ ಮಗ ಆಂಜನೇಯ. ಕಶ್ಯಪ ಋಷಿ ಮತ್ತು ಅದಿತಿಯ ಮಗ ಸೂರ್ಯ. ಆಂಜನೇಯನು ತನ್ನ ಗುರುವಾದ ಸೂರ್ಯದೇವನಿಗೆ ಕೊಟ್ಟ ಮಾತಿನಂತೆ ತನ್ನ ಸುಮೇರು ರಾಜ್ಯವನ್ನು ತ್ಯಜಿಸಿ ಸೂರ್ಯದೇವನ ಅಂಶದಿಂದ ಜನಿಸಿದ ಕಿಷ್ಕಿಂದಾ ರಾಜನಾದ ಸುಗ್ರೀವನ ಬಳಿಗೆ ಹೋಗುತ್ತಾನೆ. ಹೀಗೆ ತನ್ನನ್ನು ನಂಬಿದವರ ಕಾಪಾಡುತ್ತಾ ಶಕ್ತಿ,ಭಕ್ತಿ,ಯುಕ್ತಿ ಇವುಗಳ ಸಂಕೇತವಾಗಿದ್ದಾನೆ.

ಪ್ರತಿ ವರ್ಷ ಸೂರ್ಯ ಹುಟ್ಟಿದ ದಿನವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಮಾಘ ಮಾಸ ಶುಕ್ಲ ಪಕ್ಷ ಸಪ್ತಮಿ ದಿನ (ರಥಸಪ್ತಮಿ) ಸೂರ್ಯಪುರದಲ್ಲಿ ರಥೋತ್ಸವ ಜರುಗುತ್ತದೆ. ಮಕರ ಸಂಕ್ರಾಂತಿ ಮತ್ತು ರಥಸಪ್ತಮಿ ದಿನಸೂರ್ಯಮಾಲೆ ಧರಿಸಿ ಭಕ್ತರು ಶ್ರೀ ಕ್ಷೇತ್ರ ಸೂರ್ಯಪುರಕ್ಕೆ ಬರುತ್ತಾರೆ. ಸುಂದರ ಪ್ರಕೃತಿಯ ನಿಸರ್ಗದ ತಾಣ ಸೂರ್ಯಪುರ, ಧ್ಯಾನ, ಯೋಗ, ಮತ್ತು ಮನಃಶಾಂತಿಗೆ ಸೂಕ್ತವಾದ ಸ್ಥಳ.

ಸೂರ್ಯಪುರಕ್ಕೆ ದೂರದ ಊರುಗಳಿಂದ ಬರುವ ಭಕ್ತರು ಮತ್ತು ಪ್ರವಾಸಿಗರು ಉಳಿದುಕೊಳ್ಳಲು ರೂಮುಗಳು ದೊರೆಯುತ್ತವೆ. ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಸಮುದಾಯ ಭವನ ಲಭ್ಯವಿದೆ. ಭಕ್ತರಿಗೆ ಪ್ರತಿದಿನ ಟ್ರಸ್ಟ್ ವತಿಯಿಂದ ದಾಸೋಹ ವ್ಯವಸ್ಥೆ ಇರುತ್ತದೆ. ಸೂರ್ಯ ಮತ್ತು ಆಂಜನೇಯ ನೆಲೆಸಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ದೇವಾಲಯ ತುಂಬಾ ಅಪರೂಪವಾಗಿದ್ದು, ಸ್ವಾಮಿ ದಕ್ಷಿಣಾಭಿಮುಖವಾಗಿರುವುದು ಇಲ್ಲಿನ ಮತ್ತೊಂದು ವಿಶೇಷ.

ಶ್ರೀ ಕ್ಷೇತ್ರದಲ್ಲಿ ನವಗ್ರಹವನ, ನಕ್ಷತ್ರವನ, ಮತ್ತು ರಾಶಿವನ ಇದ್ದು ಭಕ್ತರು ತಮ್ಮ ರಾಶಿ, ನಕ್ಷತ್ರ, ಮತ್ತು ಗ್ರಹಗಳ ಅನುಸಾರವಾಗಿ ಪ್ರಾರ್ಥನೆ ಸಲ್ಲಿಸಬಹುದು. ಸೂರ್ಯಪುರ ಇಲ್ಲಿಗೆ ಬರುವ ಭಕ್ತರು ಗೂಗಲ್ ಮ್ಯಾಪ್ ನಲ್ಲಿ ಈ ರೀತಿ ವೀಕ್ಷಿಸಬಹುದು. ಸೂರ್ಯಾಂಜನೇಯ ದೇವಸ್ಥಾನ, ಸೂರ್ಯಪುರ ಮಠ.

ಶ್ರೀ ಕ್ಷೇತ್ರ ತುಮಕೂರು ಇಲ್ಲಿಂದ 24. ಕಿ.ಮೀ ಮತ್ತು ಬೆಂಗಳೂರು ಇಲ್ಲಿಂದ 60 ಕಿ.ಮೀ. ದೂರದಲ್ಲಿ ಇದೆ. ಶ್ರೀ ಕ್ಷೇತ್ರ ಸೂರ್ಯಪುರ ಸಂಪೂರ್ಣ ವಾಸ್ತು ರೀತಿಯಿಂದ ಕೂಡಿರುವುದರಿಂದ ಭಕ್ತರ ಸಕಲ ಕೋರಿಕೆಗಳನ್ನು ಶ್ರೀ ಸೂರ್ಯಾಂಜನೇಯ ಸ್ವಾಮಿ ನೆರವೇರಿಸುತ್ತಿದ್ದಾನೆ. ಸೂರ್ಯಪುರದ ಗುಟ್ಟೆಯ ಮೇಲಿರುವ ಗುಟ್ಟೆ ಗಣಪತಿ ದರ್ಶನ ಮೊದಲು ಮಾಡಿ ನಂತರ ಸೂರ್ಯಾಂಜನೇಯ ಸ್ವಾಮಿ ದರ್ಶನ ಮಾಡುವುದು ಇಲ್ಲಿನ ಸಂಪ್ರದಾಯ.

ಆರೋಗ್ಯ,ಆಯುಸ್ಸು ಐಶ್ವರ್ಯ, ಸಂತಾನ ಬಾಗ್ಯ, ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಶ್ರೀ ಸೂರ್ಯಾಂಜನೇಯ ಸ್ವಾಮಿ ನೆಲೆಸಿರುವ ಸೂರ್ಯಪುರ ಒಂದು ಪುಣ್ಯ ಕ್ಷೇತ್ರವಾಗಿದೆ.n

LEAVE A REPLY

Please enter your comment!
Please enter your name here