ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಕರೋನಾ ಹೋಗಿಲ್ಲ. ಉತ್ತರ ಕಾಲವೇ ಹೇಳುತ್ತಿದೆ : ಮಾರ್ಚ 25,2020 ರಿಂದ 56 ದಿನಗಳವರೆಗೆ ದೇಶದಲ್ಲಿ ಹೇರಿದ್ದ ಲಾಕ್ಡೌನ್ ಅವಧಿಯಲ್ಲಿ 130 ಕೋಟಿ ಪ್ರಜೆಗಳಿಗೆ ಮನೆಯಲ್ಲಿ ಕೂಡಿಹಾಕುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಲಾಕ್ಡೌನ್ ಅವಧಿಯಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಭಾರತಕ್ಕೆ ದೊಡ್ಡ ಸವಾಲು ಆಗಿತ್ತು ಮತ್ತು ಅಷ್ಟೇ ನಷ್ಟವೂ ಆಯಿತು.
ಭಯಭೀತರಾದ ಪ್ರಜೆಗಳಿಗೆ ಇತರೇ ಸೌಲಭ್ಯ, ಸೌಕರ್ಯಗಳನ್ನು ಒದಗಿಸುತ್ತಾ ಜನರ ಮನಸ್ಸನ್ನು ಸ್ವಲ್ಪ ಆಧ್ಯಾತ್ಮಿಕದ ಕಡೆಗೆ ವಾಲಿಸಿ ಸಂತೈಸುವುದು ಪ್ರಧಾನಿಗಳ ಗುರಿಯಾಗಿತ್ತು. ಅದು ಸಫಲವೂ ಆಯಿತು. ಅಮೇರಿಕಾದಲ್ಲಿ ಕರೋನಾ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ, ಬ್ರಿಟನ್ ಇನ್ನೂ ಬೆದರುತ್ತಲೇ ಇದೆ, ಬೇರೆ ದೇಶಗಳು ರೂಪಾಂತರಿ ತಳಿಯ ಭೀತಿಯಲ್ಲಿವೆ. ದೀಪ ಬೆಳಗುವುದು, ಚಪ್ಪಾಳೆ ತಟ್ಟುವುದು ಆಧ್ಯಾತ್ಮಿಕದ ಅಂಶಗಳಾಗಿದ್ದರೂ ವೈಜ್ಞಾನಿಕ ಹಿನ್ನೆಲೆ ಅದಕ್ಕಿತ್ತು.
ಪ್ರಜೆಗಳ ಮನೋಬಲ ಇಮ್ಮಡಿಗೊಳಿಸುವ ಗುರಿಯಾಗಿತ್ತು. ಇದನ್ನೇ ಟೀಕೆಗೆ ಬಳಸಿದ ಕೆಲವೇ ಕೆಲವು ವಿರೋಧ ಪಕ್ಷಗಳು ಇಂದು ಉಸಿರಾಡುತ್ತಾ ಹೊರಗೆ ಓಡಾಡುತ್ತಿದ್ದಾರೆ, ವ್ಯವಹಾರಗಳೂ ಕುದುರುತ್ತಿವೆ. ಟೀಕಿಸಿದವರಿಗೂ ಈಗ ಅರ್ಥವಾಗಿದೆ. ಲಸಿಕೆ ಈಗ ಬಂತು ಆಗ ಬಂತು ಎನ್ನುವ ಆಶಾಭಾವನೆ ಮೂಡಿಸುತ್ತಲೇ ಹಂತ ಹಂತವಾಗಿ ಪ್ರಜೆಗಳಿಗೆ ಉಚಿತ ರೇಷನ್ ಹಂಚುತ್ತಾ, ಬ್ಯಾಂಕ್ ಸಾಲದ ಮರುಪಾವತಿ ಮುಂದೊಡಿಸುತ್ತಾ ಆರ್ಥಿಕತೆ ಉಳಿಸಿಕೊಳ್ಳುವುದೂ ದೊಡ್ಡ ಸವಾಲಾಗಿ ಎದುರಾಗಿತ್ತು.
ಈತನ್ಮಧ್ಯೆ ಚೀನಾ ದೇಶ ಕಾಲು ಕೆದರಿ ಬಂದಿತ್ತು. ಇಷ್ಟನ್ನೆಲ್ಲಾ ಸಮರ್ಥವಾಗಿ ನಿಭಾಯಿಸಿದ ಪ್ರಧಾನಿ ನರೇಂದ್ರ ಮೋದಿಜಿ ಆಗಾಗ ದೃಶ್ಯ ಮಾಧ್ಯಮಗಳ ಮುಖಾಂತರ ಪ್ರಜೆಗಳ ಮುಂದೆ ಹಾಜರಾಗಿ ಧೈರ್ಯ ತುಂಬುವ ಕೆಲಸ ನಿರಂತರವಾಗಿ ಮಾಡಿದರು. ತನಗಾಗಿ,ತನ್ನ ಕುಟುಂಬಕ್ಕಾಗಿ ಅಲ್ಲ ಸಮಸ್ತ ಭಾರತದ ಸರ್ವ ಜನಾಂಗಕ್ಕೂ ಬೆನ್ನೆಲುಬಾಗಿ ನಿಲ್ಲುವೆ ಎಂದು ಸಾರಿ ಹೇಳಿದರು,ಅಷ್ಟೇ ಅಲ್ಲ ವಿವಿಧ ದೇಶಗಳಲ್ಲಿ ನೆಲೆಸಿದ್ದ ಭಾರತೀಯ ಪ್ರಜೆಗಳಿಗೂ ನಿಮ್ಮ ಜೊತೆ ನಾನಿದ್ದೇನೆ ಧೈರ್ಯವಾಗಿ ಇದ್ದಲ್ಲಿಯೇ ಇರಿ ಎಂದು ಅಭಯಹಸ್ತ ನೀಡಿದರು.
ಕೋಟಿ ಜನ ಸಾಂಕ್ರಾಮಿಕ ರೋಗಕ್ಕೆ ಭಾಧಿತರಾದರೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ನಿತ್ಯ ನಿರಂತರ ಆರೈಕೆ,ಸತತ ಔಷದೋಪಚಾರದ ಸರಬರಾಜು,ನಿಯಂತ್ರಣ ಇತ್ಯಾದಿ ಕಟ್ಟುನಿಟ್ಟಾಗಿ ನಿಭಾಯಿಸಿ, ಉಚಿತ ಚಿಕಿತ್ಸೆ ಕೊಡಿಸಿದ ಕೀರ್ತಿ ಮೋದಿಜಿ ಯವರಿಗೆ ಸಲ್ಲುತ್ತದೆ. ವಿವಿಧ ದೇಶಗಳು ನಿಬ್ಬೆರರಾಗಿ ನೋಡುವಂತೆ ಕೆಲಸ ಮಾಡಿ ತೋರಿಸಿದ ಧೀಮಂತ ನಾಯಕ.
ಸಾಂಕ್ರಾಮಿಕ ರೋಗಕ್ಕೆ ಆವರಿಸಿಕೊಂಡ ಇಡೀ ಜಗತ್ತು ಭಾರತದ ರೋಗ ನಿಯಂತ್ರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವು. ಮೂಲಭೂತ ಸೌಕರ್ಯದ ಜೊತೆ ಆಸ್ಪತ್ರೆ, ಔಷಧ, ವೈದ್ಯರ ಕೊರತೆಯೊಂದಿಗೆ ಮಿತಿಮೀರಿದ ಜನಸಾಂದ್ರತೆಯ ಮಧ್ಯೆ ಮೋದಿ ಗೆಲ್ಲುವುದು ಕಷ್ಟ ಎಂದು ಗೇಲಿ ಮಾಡಿದ್ದೂ ಉಂಟು. ಇದನ್ನೆಲ್ಲಾ ಮೆಟ್ಟಿ ನಿಂತು ಕರೋನಾ ವಾರಿಯರ್ಸ್ ಗಳಿಗೆ ಧೈರ್ಯ ತುಂಬಿ ಮುನ್ನುಗ್ಗುವಂತೆ ಬೆನ್ನು ತಟ್ಟಿದರು.
ಜಾತಿ, ಕುಲ, ಪಂಥ, ಧರ್ಮ, ರಾಜಕೀಯವನ್ನೂ ಮೀರಿ ಪ್ರಜೆಗಳೆಲ್ಲಾ ನಾವು ಒಂದು ಕುಟುಂಬದ ಸದಸ್ಯರಂತೆ ಎಂದು ಪದೇ ಪದೇ ಸಾರಿ ಹೇಳಿದರು. ಪ್ರಜೆಗಳ ಮಧ್ಯೆ ಭೇದ ಭಾವ ಬರಬಾರದೆಂದು ಒಂದು ಕೈಯಲ್ಲಿ ಖುರಾನ್, ಇನ್ನೊಂದು ಕೈಯಲ್ಲಿ ಭಗವದ್ಗೀತೆ ಹಿಡಿದು ಸರ್ವ ಜನಾಂಗವನ್ನೂ ಕಾಳಜಿಪೂರ್ವಕ ನೋಡಿಕೊಳ್ಳುವೆ ಎಂದು ಕುಟುಂಬದ ಹಿರಿಯನಂತೆ ಜವಾಬ್ದಾರಿ ವಹಿಸಿಕೊಂಡ ಶ್ರೇಷ್ಠ ನಾಯಕ ಮೋದಿಜಿ. ಯಾರಿಗೂ ಊಟದ ತೊಂದರೆ ಆಗಬಾರದೆಂದು ಸತತ 8 ತಿಂಗಳು ಕಾಲ ಆಹಾರ ಪದಾರ್ಥಗಳು ಉಚಿತವಾಗಿ ಜನರಿಗೆ ತಲುಪುವಂತೆ ಮಾಡಿದರು.
16.01.2021 ರಿಂದ ಸ್ವದೇಶಿ ಲಸಿಕೆ ಜನರಿಗೆ ತಲುಪುವಂತೆ ಮಾಡಿದ್ದಾರೆ, ಆರ್ಥಿಕತೆಯೂ ಮಾಮೂಲಿ ಹಂತಕ್ಕೆ ಬರುತ್ತಿದೆ. ಅಷ್ಟೇ ಅಲ್ಲ ಭಾರತದ ಲಸಿಕೆಗೆ ಜಗತ್ತಿನ 90 ಕ್ಕೂ ಹೆಚ್ಚು ದೇಶಗಳು ಬೇಡಿಕೆ ಇಟ್ಟಿವೆ. ಇದು ಸಾಧನೆ ಎನ್ನದೇ ಏನೆನ್ನಬೇಕು? ಬೃಹತ್ ದೇಶ ಮುನ್ನೆಡೆಸುವ ಒಬ್ಬ ಸಮರ್ಥ ನಾಯಕನಿಂದ ಇದೆಲ್ಲಾ ಸಾಧ್ಯವಾಯಿತು ಎಂದರೂ ಅತಿಶಯೋಕ್ತಿಯೇನಲ್ಲ. ಲಾಕ್ಡೌನ್, ಸಾಂಕ್ರಾಮಿಕ ರೋಗದ ಭಯದಿಂದ ಜನ ಮನೆಯಲ್ಲಿಯೇ ಇದ್ದರೂ ಅವಶ್ಯಕ ದಿನಸಿ ವಸ್ತುಗಳ ಪೂರೈಕೆ, ಸಾಗಾಟ, ಸಾರ್ವಜನಿಕ ಸೇವೆಗೆ ಕುಂದು ಬರದಂತೆ ನೋಡಿಕೊಂಡ ಪ್ರಭಲ ಪ್ರಧಾನಿ ನರೇಂದ್ರ ಮೋದಿಜಿ.
ಇಷ್ಟೆಲ್ಲಾ ಇದ್ದರೂ ರಾಜಕೀಯ ವಿರೋಧ ಪಕ್ಷಗಳ ಟೀಕೆಗೆ ಗುರಿಯಾದರು ಆದರೂ ಅವರನ್ನೂ ವಿಶ್ವಾಸಕ್ಕೆ ಪಡೆದು ಜಗತ್ತಿನಲ್ಲಿಯೇ ಶ್ರೇಷ್ಟ ನಾಯಕ ಎಂಬ ಮಾತಿಗೆ ಭಾಜನರಾದರು. ತನ್ನ ಅಧಿಕಾರದ ಸ್ವಾರ್ಥಕ್ಕಾಗಿ 75-77ರಲ್ಲಿ ತುರ್ತು ಪರಿಸ್ಥಿತಿ ಹೇರಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಎಲ್ಲರನ್ನೂ ಜೈ’ಲಿಗೆ ತಳ್ಳಿ, 21 ತಿಂಗಳು ಪ್ರಜೆಗಳು ಬಾಯಿ ಬಿಡದಂತೆ ಮಾಡಿದ್ದ ಆ ಪ್ರಧಾನಿ ಎಲ್ಲಿ. ಈ ಪ್ರಧಾನಿ ಎಲ್ಲಿ? ಒಬ್ಬರು ಸ್ವಾರ್ಥ ಅಧಿಕಾರಕ್ಕಾಗಿ ತನಗಿಷ್ಟ ಬಂದ ರೀತಿ ಸಂವಿಧಾನ ತಿದ್ದಿದರು.
ಇವರು ರಾಜಕೀಯ ಮರೆತು ಮನೆಯ ಹಿರಿಯನಂತೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು, ಜನರ ಭಾವನೆಗಳಿಗೆ ಬೆಲೆ ಕೊಟ್ಟು ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದರು. ಭಾರತ ಅಷ್ಟೇ ಅಲ್ಲ ಜಗತ್ತಿನ ಬಹುತೇಕ ಜನಮಾನಸದಲ್ಲಿ ಮಿಂಚುತ್ತಿರುವ ಮಾಣಿಕ್ಯ ಭಾರತದ ಪ್ರಧಾನಿ ನರೇಂದ್ರ ಮೋದಿಜಿ ಮಾತ್ರ. ಇದು ರಾಜಕೀಯ ಟೀಕೆ ಅಥವಾ ಪ್ರಶಂಸೆ ಖಂಡಿತ ಅಲ್ಲ, ವಾಸ್ತವಿಕ ಸ್ಥಿತಿಯಲ್ಲಿ ದೇಶದ ನಾಯಕ ಹೇಗೆ ಇರಬೇಕು ಎಂದು ತೋರಿಸಿ ಕೊಟ್ಟ ಪ್ರಧಾನಿ ಬಗ್ಗೆ ಹೆಮ್ಮೆ.