ದೀಪಾವಳಿ ಹಬ್ಬದ ಮಹತ್ವ. ಕಾರ್ತಿಕ ಮಾಸ ಎಂದರೆ ದೀಪಗಳ ಮಾಸ. ಈ ಮಾಸದ ಪ್ರಾರಂಭದಲ್ಲಿ ಬರುವ ದೀಪಗಳೇ ರಾರಾಜಿಸುವ ಅಲಂಕಾರಿಕ ಹಬ್ಬವೇ “ದೀಪಾವಳಿ”. ದೀಪಾವಳಿ ಎಂದ ತಕ್ಷಣ ಮನೆಯ ತುಂಬೆಲ್ಲ ದೀಪಗಳ ಸಾಲು. ಮನೆಯ ಮುಂದೆ ತಿಂಗಳುಗಟ್ಟಲೆ ಹಾರಾಡಲು ತಯಾರಾದ ಆಕಾಶ ಬುಟ್ಟಿಗಳು. ಡುಮ್ ಟುಸ್ ಡಮ್ ಡಮ್ ಡಮಾರ್ ಎನ್ನುತ್ತ ಸಿಡಿದು ಆಗಸದಲ್ಲೆಲ್ಲ ಚಿತ್ತಾರ ಮಾಡುವ ವಿವಿಧ ಪಟಾಕಿಗಳು.
ಹೊಚ್ಚ ಹೊಸತಾದ ಬಟ್ಟೆ, ಹೊಟ್ಟೆ ಬಿರಿಯುವಷ್ಟು ಹೋಳಿಗೆ ಕಜ್ಜಾಯಗಳು. ಕಷ್ಟ ನಷ್ಟಗಳೆಲ್ಲವನ್ನೂ ಮರೆಸಿ ಮನೆಯವರೆಲ್ಲ ಸೇರಿ ನಕ್ಕು ನಲಿಯುವ ಹಬ್ಬ ಈ “ದೀಪಾವಳಿ”. ಭಾರತೀಯರ ಅತೀ ದೊಡ್ಡ ಹಬ್ಬವಾದ ಇದನ್ನು ಕಡೆ “ದೊಡ್ಹಬ್ಬ” ಎಂದೇ ಕರೆಯಲಾಗುತ್ತದೆ. ಬಾಯಿಗೆ ಸಿಹಿಯ ಹದ , ಮನಸ್ಸಿಗೆ ಸಂತಸದ ಮುದ. ಇದೇ ನಮ್ಮ ಹಿಂದೂ ಧರ್ಮದ ಹಬ್ಬಗಳ ವೈಶಿಷ್ಟ್ಯತೆ ಎಂದರೆ ತಪ್ಪಾಗಲಾರದು. ಕಾರ್ತಿಕ ಮಾಸ ಅಥವಾ ತಿಂಗಳಾಂತ್ಯದವರೆಗೂ ಎಲ್ಲೆಡೆ ಸಾವಿರಾರು ದೀಪಗಳ ಅಲಂಕಾರ ನೋಡುವುದೇ ಚಂದ.
ನಾಡಿನ ಎಲ್ಲ ದೇವಾಲಯಗಳಲ್ಲಿ ಕಾರ್ತಿಕ ಪೂಜೆ ದೀಪೋತ್ಸವ ಒಟ್ಟಿನಲ್ಲಿ ಬೆಳಕಿನ ಹಬ್ಬಗಳ ತಿಂಗಳು. ಭಾರತೀಯರಿಗೆ ಭಾಗ್ಯ ತರುವ ಹಬ್ಬ ದೀಪಾವಳಿ. ದೀಪ ಪ್ರಕಾಶತೆ , ಜ್ಞಾನದ ಸಂಕೇತ. ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಲು ಜ್ಞಾನವೆಂಬ ದೀಪ(ಪ್ರಕಾಶ) ಅವಶ್ಯಕ. ಆದ್ದರಿಂದಲೇ “ನ” ಜ್ಞಾನೇನ ಸದೃಶಂ”(ಜ್ಞಾನಕ್ಕೆ ಸಮವಾದುದು ಯಾವುದೂ ಇಲ್ಲ) ಜ್ಞಾನ “ನಃ ಪಶು: (ಜ್ಞಾನವಿಲ್ಲದವನು ಪಶುವಿಗೆ ಸಮಾನ) ಎನ್ನಲಾಗುತ್ತದೆ.
ಅಜ್ಞಾನದ ಕತ್ತಲನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಬೀರುವುದೇ ದೀಪಾವಳಿಯ ಸತ್ಯಾರ್ಥ. ಇವೆಲ್ಲ ಹಬ್ಬಗಳು ಮಾನವನ ಸಧೃಢ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತವೆ. ಹಬ್ಬಗಳ ಹಿನ್ನೆಲೆಯಲ್ಲಿ ಬಹಳ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು, ವೈಜ್ಞಾನಿಕ ನಿಘೂಡಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಪುಣ್ಯ ಕಥೆಯನ್ನು ಬೆಸೆದು ಹಬ್ಬಕ್ಕೆ ಮೆರಗು ನೀಡಿದ್ದಾರೆ. ದೀಪಾವಳಿಯ ಕಥೆಗಳು ಹಲವಾರು. ಕೆಲವರು ಈ ದಿನದಂದು ರಾಮ ಸೀತೆ ಹಾಗೂ ಲಕ್ಷ್ಮಣರು 14 ವರ್ಷಗಳ ನಂತರ ಅಯೋಧ್ಯೆಗೆ ಮರಳಿದ ದಿನಗಳು ಎಂದರೆ.
ಮತ್ತೆ ಕೆಲವರು ಇದು ಪಾಂಡವರು 12 ವರ್ಷ ವನವಾಸ ಮತ್ತು 1 ವರ್ಷ ಅಜ್ಞಾತವಾಸವನ್ನು ಮುಗಿಸಿ ಪುನಃ ಹಸ್ತಿನಾಪುರಕ್ಕೆ ಹಿಂದಿರುಗಿದ ದಿವಸಗಳು ಎನ್ನುತ್ತಾರೆ. ಇನ್ನು ವಿಷ್ಣುಪುರಾಣಗಳು ಈ ದಿನದಂದು ಲಕ್ಮೀ ಮಾತೆ ಹಾಲಿನ ಸರೋವರದಿಂದ ಜನಿಸಿದ್ದು. ತದನಂತರ ವಿಷ್ಣುವನ್ನು ಒಪ್ಪಿ ಮದುವೆಯಾದ ದಿನಗಳು ಆದ್ದರಿಂದಲೇ ಈ ದಿನದಂದು ಲಕ್ಷ್ಮೀ ಪೂಜೆಯನ್ನು ಮಾಡಿದರೆ ಮಾತೆ ಒಲಿಯುತ್ತಾಳೆ ಎಂಬ ಕಥಾನಕವನ್ನೂ ನೀಡುತ್ತದೆ.
ಇನ್ನೂ ಹಿಂದೆ ಹೋದರೆ ಕಥೋಪನಿಷದ್ ಈ ದಿನದಂದು ಯಮ ಮತ್ತು ನಚಿಕೇತರ ನಡುವಿನ ಕಥೆಯನ್ನು ತೆರೆದಿಡುತ್ತದೆ. ಮೊದಲ ದಿನವಾದ ನರಕಚರ್ತುದಶಿಯಂದು ನಚಿಕೇತನು ಧರ್ಮ -ಅಧರ್ಮ, ಸರಿ-ತಪ್ಪು, ಅಜ್ಞಾನ-ಜ್ಞಾನ ಗಳ ಬಗ್ಗೆ ಸಂಪೂರ್ಣ ಚಿತ್ರಣ ನೀಡಿದ ದಿನ ಎಂದು ತಿಳಿಸುತ್ತದೆ. ಇನ್ನು ಇದರೊಂದಿಗೆ ಬ’ಲಿ ಚಕ್ರವರ್ತಿಯ ಕಥೆಯೂ ಸೇರಿಕೊಂಡಿದೆ. ಸ್ವರ್ಗವನ್ನೇ ಗೆದ್ದು ಅಲ್ಲಿ ಭೂಮಿಯ ಹಾಗೆ ಏನು ಇಲ್ಲ ಎಂದು ಹಿಂದಿರುಗಿದ ಮಹಾ ಪರಾಕ್ರಮಿ ಬಲಿ ಚಕ್ರವರ್ತಿಯು ಇಂದ್ರ ಸ್ಥಾನವನ್ನು ಪಡೆಯಲು ಯಜ್ಞ ಮಾಡುತ್ತಿದ್ದ.
ಆಗ ದೇವತೆಗಳ ಬೇಡಿಕೆಯಂತೆ ವಾಮನ ಅವತಾರದಲ್ಲಿ ಪ್ರತ್ಯಕ್ಷನಾದ ವಿಷ್ಣುವು 3 ಪಾದ (ಅಡಿ) ಜಾಗವನ್ನು ಕೇಳಿದಾಗ ಯಾವುದೇ ಯೋಚನೆ ಮಾಡದೇ ದಾನದ ಅರ್ಗ್ಯ ನೀಡಿದ ಬಲಿಗೆ ತನ್ನ ಬಲವ ಪ್ರದರ್ಶಿಸಿ ಭೂ-ಮಂಡಲದಲ್ಲೊಂದು ಕಾಲು ಆಕಾಶದಲ್ಲೊಂದು ಪಾದವಿರಿಸಿ. ಇನ್ನೊಂದು ಪಾದವೆಲ್ಲಿರಿಸಲಿ ಎಂದಾಗ ಸರ್ವತ್ಸ್ವವನ್ನೂ ಅರ್ಪಿಸುತ್ತ ತನ್ನ ಶಿರಸ್ಸಿನ ಮೇಲಿರಿಸಿ ಎಂದ. ಅದಕ್ಕನುಗುಣವಾಗಿ ವಾಮನನು ಅವನನ್ನು ಭೂಗರ್ಭಕ್ಕಿಳಿಸಿದ. ಆತನ ತ್ಯಾಗಕ್ಕೆ ಮೆಚ್ಚಿ ನಿನಗೇನು ಬೇಕು ಎಂದಾಗ ಮುಕ್ತಿ ಎಂದನಂತೆ.
ಇಂತಹ ತ್ಯಾಗಮನೋಭಾವದಿಂದ ಪ್ರಭಾವಿತನಾದ ವಿಷ್ಣುವು ಈ ದಿನವನ್ನ ಬಲಿಪಾಡ್ಯ ಎಂದೇ ವಿಶ್ವದಾದ್ಯಂತ ಆಚರಿಸುತ್ತಾರೆ ಎಂಬ ವರನಿತ್ತ ಎಂಬ ಪ್ರತೀತಿ ಕೂಡ ಇದೆ. ಇವೆಲ್ಲವನ್ನೂ ಒಡಗೂಡಿ ನರಕಾಸುರನನ್ನು ವಧೆ ಮಾಡಿದ ದಿನವೂ ಇದೇ ಎಂದೂ ಹೇಳುವುದುಂಟು. ಹತ್ತು ಹಲವಾರು ಕಥೆಗಳನ್ನು ದೀಪಾವಳಿ ಹೊಂದಿದ್ದರೂ, ಇವೆಲ್ಲರ ಅರ್ಥ ಒಂದೇ ಒಳ್ಳೆಯದರ ಗೆಲುವು. ನಮ್ಮೆಲ್ಲರ ಮನಸ್ಸಿನ ವಿಕಾರಗಳಾದ ಕಾಮ, ಕ್ರೋಧ ಮದ, ಮತ್ಸರಗಳನ್ನು ಜುಸಿ.(ಬಲಿಯಾಗಿಸಿ), ಹೊಸ ತನದಿಂದ ಉತ್ತಮ ವಿಚಾರಗಳ ಉಗಮವಾಗಬೇಕು.
ಮನದ ಕೊಳೆಯನ್ನು ಕಳಚಿ ಶುಭ್ರ ಬಟ್ಟೆಯ ತೊಡುವ ಹಾಗೆ, ನಿರಾಕಾರ ಜ್ಯೋತಿಯಷ್ಟೇ ಪರಿಶುದ್ಧ ಮನಸ್ಸನ್ನು ಪಡೆಯುವುದು. ನೀರು ತುಂಬುವ ಆಚರಣೆಂದ ಆರಂಭವಾಗುವ ಈ ಹಬ್ಬದ ಪ್ರತಿದಿನಕ್ಕೂ ಅದರದೇ ಆದ ವೈಶಿಷ್ಟ್ಯತೆ ಇದೆ. ಪ್ರಥಮ ದಿನ – ದಂತೇರಾಸ್ (ತ್ರಯೋದಶಿ) : ಈ ದಿನವು ಚಿನ್ನದ ಖರೀದಿಗೆ ಅತ್ಯುತ್ತಮವಾದ ದಿನ. ಖರೀದಿ ಹಬ್ಬದ ತಯಾರಿ ಈ ದಿನದಂದು ಜೋರು. ಈ ದಿನದಂದು ಯಮದೀಪದಾನ ಎಂದು ಮಾಡುತ್ತಾರೆ.
ಸಂಜೆಯ ವೇಳೆ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಅಪಮೃತ್ಯು ಬಾರದ ಹಾಗೆ ಯಮಧರ್ಮರಾಯನು ನೋಡಿಕೊಳ್ಳುತ್ತಾನೆ ಎಂಬ ನಂಬಿಕೆ ಇದೆ. ಎರಡನೇಯ ದಿನ – ನರಕ ಚರ್ತುದಶಿ : ಈ ದಿನವು ವಿಶೇಷವಾದ ದಿನ ಚಿತ್ತಾಕರ್ಷಕವಾದ ರಂಗೋಲಿಂದ ಪ್ರಾರಂಭವಾಗುವ ಈ ದಿನದ ಪ್ರಮುಖ ಕಾರ್ಯ ಎಣ್ಣೆ ಸ್ನಾನ. ಹೆಣ್ಣು ಗಂಡು ಎನ್ನದೇ ಉಗುರಿಗೆ ಮೆಹಂದಿ ಹಚ್ಚಿಕೊಳ್ಳುವ ಸಂಭ್ರಮದ ದಿನ. ಲಕ್ಷ್ಮೀ ಪೂಜೆಗೋಸ್ಕರ ಸಿಹಿತಿಂಡಿಗಳ ಸಾಲು ಸಿದ್ಧವಾಗುವ ದಿನವೂ ಹೌದು.
ಮೂರನೆಯ ದಿನ – ಲಕ್ಷ್ಮೀ ಪೂಜೆ : ತಂದ ಹೊಸ ಬಟ್ಟೆಯ ಧರಿಸಿ ಕಿಲ ಕಿಲನೆ ನಕ್ಕು ತಯಾರಾಗಿ, ಈ ಸಂತಸಕ್ಕೆ ಕಾರಣವಾದ ಲಕ್ಷ್ಮೀ ದೇವಿಯ ಪೂಜೆಗೈಯುವ ದಿನ. ಈ ದಿನ ಅಂಗಡಿಕಾರರು , ವ್ಯಾಪಾರಿಗಳಿಗೆ ಪ್ರಾಮುಖ್ಯದಿನ. ಎಲ್ಲ ಲೆಕ್ಕಾಚಾರಗಳನ್ನು ಮುಗಿಸಿ ಪುನಃ ಹೊಸ ಲೆಕ್ಕ ಬರೆಯಲಾರಂಭಿಸುವ ದಿನ. ಈ ದಿನದಂದು ಬೆಳಿಗ್ಗೆ ಕುಬೇರ ಹಾಗೂ ಶ್ರೀಚಕ್ರದ ಪೂಜೆಯನ್ನೂ ಮಾಡುತ್ತಾರೆ. ಸಂಜೆಯ ವೇಳೆಯಲ್ಲಿ ಕ್ಷ್ಮಿಯ ಜೊತೆ ಸರಸ್ವತಿಯನ್ನೂ ಪೂಜಿಸಿ. ಪುಸ್ತಕಗಳನ್ನು ಓದಿಸುತ್ತಾರೆ.
ನಾಲ್ಕನೇಯ ದಿನ – ಬಲಿ ಪಾಡ್ಯ : ಈ ದಿನವು ಕರಾವಳಿ ಪ್ರದೇಶದವರಿಗೆ ಪ್ರಮುಖದಿನ ಅದರಲ್ಲಿಯೂ ಅಡಿಕೆ ಬೆಳೆಗಾರರಿಗೆ. ಎಳೆಯ ಅಡಿಕೆ ಸಿಂಗಾರವನ್ನು ತಂದಿಟ್ಟು ಅದನ್ನು ಸಿಂಗರಿಸಿ. ಪೂಜಿಸುವ ದಿನ . ತಮ್ಮ ಬೆಳೆಯನ್ನು ಪೂಜಿಸುವ ಸುದಿನ. ಈ ದಿನ ಗಂಡ -ಹೆಂಡತಿಯರ ಪ್ರೀತಿಯ ಸಂಕೇತವೂ ಹೌದು. ಗಂಡನು ಪ್ರೀತಿಯ ಹೆಂಡತಿಗೆ ಉಡುಗೊರೆಯನ್ನು ಕೊಡುವ ದಿನ. ಈ ದಿನದಂದು ಹೊಸತಾಗಿ ಮದುವೆಯಾದ ಜೋಡಿಯನ್ನು ವಿಶೇಷ ಹಬ್ಬದೂಟಕ್ಕೆ ಆಹ್ವಾನಿಸುತ್ತಾರೆ. ಈ ದಿನಕ್ಕೆ ಭಾವನ ಬಿದಿಗೆ ಎಂಬ ಹೆಸರಿದೆ.
ಇದೇ ದಿನದಂದು ಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ ನೆನಪಿಗಾಗಿ ಗೋವರ್ಧನ ಪೂಜೆಯನ್ನೂ ಮಾಡಲಾಗುತ್ತದೆ. ಇದೇ ದಿನದಂದು ಗೋವುಗಳಿಗೆ ಹಚ್ಚೆಯನ್ನು ಹಾಕಿ, ಹೂವಿನ ದಂಡೆ ಕಟ್ಟಿ. ಕಾಯಿ ಹಣ್ಣುಗಳಿಂದ ಸಿಂಗರಿಸಿ. ಪೂಜಿಸಿ ಹೋ. ಎನ್ನುತ್ತಾ ಅವನ್ನು ಮೇಯಲು ಬಿಡುತ್ತಾರೆ. ಐದನೇಯ ದಿನ – ಅಕ್ಕನ ತದಿಗೆ. ಈ ದಿನ ಸಹೋದರ – ಸಹೋದರಿಯರ ಪ್ರೀತಿ ಸೌಹಾರ್ದದ ದಿನ. ಈ ದಿನದಂದು ಮಹಿಳೆಯರು, ಸಹೋದರಿಯರು ತಮ್ಮ ಸಹೋದರರಿಗಾಗಿ ಪೂಜೆಯನ್ನು ಮಾಡುತ್ತಾರೆ.
ದೂರದಲ್ಲಿರುವ ಸಹೋದರಿಯ ಮನೆಗೆ ಸಹೋದರನು ಭೇಟಿ ನೀಡಿ ಉಡುಗೊರೆಗಳನ್ನು ನೀಡುವ ಪದ್ಧತಿಯೂ ಇದೆ. ಇಷ್ಟೆಲ್ಲ ವಿಶೇಷತೆ ಹೊಂದಿದ ದೀಪಾವಳಿಯು ಕೇವಲ ಆಧ್ಯಾತ್ಮಕ ಅರ್ಥವನ್ನಷ್ಟೇ ಹೊಂದಿರದೇ ವೈಜ್ಞಾನಿಕ ವಿಶ್ಲೇಷಣೆಯನ್ನೂ ಹೊಂದಿದೆ. ಚಳಿಗಾಲವಾದ ಕಾರಣ ಎಣ್ಣೆಯ ಸ್ನಾನವನ್ನು ಮಾಡುವುದರಿಂದ ತ್ವಚೆ ಬಿರುಕು ಬಿಡುವುದು ಕಡಿಮೆಯಾಗುತ್ತದೆ. ದೀಪವನ್ನು ಹಚ್ಚುವುದರಿಂದ ಮನೆಯೊಳಗಿನ ಉಷ್ಣತೆ ಹೆಚ್ಚಾಗುವುದು ಖಚಿತ.
ಕರಿದ ತಿಂಡಿಗಳು ದೇಹಕ್ಕೆ ಬೇಕಾದ ಕೊಬ್ಬಿನಾಂಶವನ್ನು ದೊರಕಿಸುವುದರಿಂದ ಮೈ ಸುಕ್ಕಾಗುವಿಕೆಯನ್ನೂ ತಪ್ಪಿಸುತ್ತದೆ. ಮನೆಯನ್ನು ಸ್ವಚ್ಛಗೊಳಿಸಿ ಬಣ್ಣವ ಬಳಿಯುವುದರಿಂದ ಕ್ರಿಮಿ ಕೀಟಗಳ ಬಾಧೆಗಳೂ ಕೂಡ ಕಡಿಮೆಯಾಗುತ್ತದೆ. ಆದರೆ ಕಾಲಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಮತ್ತು ವೈಜ್ಞಾನಿಕ ವಿಶ್ಲೇಷಣೆಯನ್ನೂ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ. ಏಕೆಂದರೆ ಮಾನವನು ಹಬ್ಬಗಳ ಅಲೌಕಿಕ ಅರ್ಥವನ್ನು ತೆಗೆದುಕೊಳ್ಳದೇ ಕೇವಲ ಸ್ಥೂಲರೂಪದಲ್ಲಿ ಆಚರಿಸುತ್ತಿರುವುದರಿಂದ ಅಲೌಕಿಕ ಸಂತೋಷದ ಅನುಭವೇ ಆಗುತ್ತಿಲ್ಲ.
ಕೇವಲ ಆಡಂಬರಕ್ಕೊಸ್ಕರ ನಾವು ದೀಪಾವಳಿ ಆಚರಿಸುತ್ತಿದ್ದೇವೆ. ದೀಪಾವಳಿಯು ನಿಧಾನವಾಗಿ ದಿವಾಳಿಯಾಗಿ ಪರಿವರ್ತನೆ ಹೊಂದುತ್ತಿದೆ. ವಿಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ. ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ. ಸತ್ಯದ ಬಲದಿಂದ ಅಸತ್ಯದ ಕೆಡು ನೋಡಯ್ಯ” ಎನ್ನುವ ಶರಣರ ನುಡಿಯಂತೆ ನಮ್ಮಲ್ಲಿರುವ ಅಜ್ಞಾನದ ಕತ್ತಲನ್ನು ಜ್ಞಾನದ ಬೆಳಕಿನಿಂದ ನಿವಾರಿಕೊಂಡು ಅಂತರಂಗದ ಜ್ಯೋತಿಯನ್ನು ಬೆಳಗಿಸಿ ಪರಮಾನಂದದ ಪ್ರಾಪ್ತಿ ಮಾಡಿಕೊಳ್ಳುವುದೇ ದೀಪಾವಳಿಯ ಯತಾರ್ಥ ಆಚರಣೆ.
ಹಾಗಾದರೆ ಬನ್ನಿ ಸುಖ ಶಾಂತಿ, ನಲಿವು, ಜ್ಞಾನದ ಸೌಹಾರ್ದತೆಯ ಸಂಕೇತವಾದ ದೀಪಾವಳಿಯನ್ನು ಆತ್ಮದೀಪವ ಬೆಳಗಿಸಿ ಅನ್ಯರಿಗೂ ಜ್ಞಾನದೀಪವನ್ನು ದಾನ ಮಾಡಿ ಆಚರಿಸೋಣ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.