ಬೆಂಗಳೂರು: ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ಅವರಿಗೆ 69 ವರ್ಷ ವಯಸ್ಸು ಆಗಿತ್ತು. ಕಿಡ್ನಿ, ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಕೆಂಗೇರಿಯ ಬಿಡಿಎ ಅಪಾರ್ಟ್ಮೆಂಟ್ನಲ್ಲಿ ಅವರು ನಿಧನರಾದರು. ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಅವರು ಈವರೆಗೆ ಒಟ್ಟು 650 ಸಿನಿಮಾಗಳಲ್ಲಿ ನಟಿಸಿದ್ದರು. ತಮ್ಮದೇ ಆದ ಮಿಮಿಕ್ರಿ ತಂಡವನ್ನು ಕಟ್ಟಿಕೊಂಡಿದ್ದ ರಾಜ ಗೋಪಾಲ್ ಅವರು ಸಾವಿರಾರು ಸ್ಟೇಜ್ ಶೋಗಳನ್ನೂ ನೀಡಿದ್ದಾರೆ. ಕೊರೋನಾದಿಂದಾಗಿ ಲಾಕ್ಡೌನ್ ಆರಂಭವಾಗುವವರೆಗೂ ಈ ನಟ ಸ್ಟೇಜ್ ಶೋ ನೀಡುತ್ತಿದ್ದರು.
‘ವಿಷ್ಣುವರ್ಧನ್, ಶಶಿಕುಮಾರ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಒಂದು ತಮಿಳು ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಕರಿಬಸವಯ್ಯ, ಬ್ಯಾಂಕ್ ಜನಾರ್ಧನ್ ಸೇರಿದಂತೆ ಇನ್ನೂ ಹಲವರೊಂದಿಗೆ ಸೇರಿ ತಮ್ಮದೇ ಆದ ಮಿಮಿಕ್ರಿತಂಡವನ್ನು ಕಟ್ಟಿಕೊಂಡು ಕಾರ್ಯಕ್ರಮ ನೀಡುತ್ತಿದ್ದರು. ಎರಡು ದಿನಗಳ ಹಿಂದೆಯಷ್ಟೆ ಅವರಿಗೆ ಕರೆ ಮಾಡಿ ಮಾತನಾಡಿದ್ದೆ. ನಾಳೆ ಅವರನ್ನು ಭೇಟಿ ಮಾಡಲು ಹೋಗಬೇಕಿತ್ತು. ಆದರೆ ವಿಧಿಯಾಟ ಇಷ್ಟು ಬೇಗೆ ರಾಜ ಗೋಪಾಲ್ ನಮ್ಮಿಂದ ದೂರಾಗಿದ್ದಾರೆ ಎಂದು ಅವರ ಬಹುಕಾಲದ ಗೆಳೆಯ ಹಾಸ್ಯ ನಟ ಡಿಂಗ್ರಿ ನಾಗರಾಜ್ ತಿಳಿಸಿದ್ದಾರೆ.