ಸ್ಮಾರ್ಟ್ ಫೋನ್ ತಗೊಂಡರೆ ಒಂದು ಕೇಜಿ ಈರುಳ್ಳಿ ಉಚಿತ
ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಳ ಮಾಡಲು ಅಂಗಡಿ ಮಾಲಿಕರು ನಾನಾ ತಂತ್ರಕ್ಕೆ ಮೊರೆ ಹೋಗುವುದು ಉಂಟು. ಒಂದು ತಗೊಂಡರೆ ಇನ್ನೊಂದು ಉಚಿತ , ಒಂದು ತಗೊಂಡರೆ ಒಂದು ಜೊತೆ ಸೀರೆ ಉಚಿತ, ಒಂದು ವಾಚು ಉಚಿತ ಹೀಗೆ ಬಗೆ ಬಗೆಯ ಆಫರ್’ಗಳನ್ನು ನೀಡುತ್ತಾರೆ.
ಹಬ್ಬ ಹುಣ್ಣುಮೆ ಬಂದರೆ ಸಾಕು ಇಂತಹ ಆಫರ್ ಗಳನ್ನು ಬಿಟ್ಟು ತಮ್ಮ ವ್ಯಾಪಾರ ಜಾಸ್ತಿ ಮಾಡಿಕೊಳ್ಳುತ್ತಾರೆ. ದೀಪಾವಳಿ ಸಮಯದಲ್ಲಿ ಮೊಬೈಲ್ ತಗೊಂಡರೆ ಪಟಾಕಿ ಉಚಿತ ಎಂದು ಬರೆದಿರುತ್ತಾರೆ. ಈಗ ನಿಮಗೊಂದು ವಿಶೇಷ ಸುದ್ದಿ ಹೇಳ್ತೀವಿ ಕೇಳಿ.
ತಮಿಳುನಾಡಿನ ತಂಜಾವೂರಿನ ಎಸ್ ಟಿ ಆರಗ ಮೊಬೈಲ್ ಅಂಗಡಿ ವಿಚಿತ್ರ ಮತ್ತು ವಿಶೇಷ ಆಫರ್ ಬಿಟ್ಟು ಸಕ್ಕತ್ ಸುದ್ದಿಯಲ್ಲಿದೆ. ಪವಾಡವೆಂದರೆ ದಿನಕ್ಕೆ ಎರಡೇ ಎರಡು ಮೊಬೈಲ್ ಮಾರಾಟ ಮಾಡುತ್ತಿದ್ದ ಈ ಅಂಗಡಿ ಈಗ ಕಳೆದ ಎರಡು ದಿನಗಳಿಂದ ಎಂಟರಿಂದ ಹತ್ತು ಮೊಬೈಲ್ ಮಾರಾಟ ಮಾಡುತ್ತಿದೆ. ಓನರ್ ಅಂತೂ ಸಕ್ಕತ್ ಖುಷಿ ಯಾಗಿದ್ದಾನೆ.
ಅಷ್ಟಕ್ಕೂ ಅವನು ಏನು ಆಫರ್ ಕೊಟ್ಟಿದ್ದಾನೆ ಗೊತ್ತೇ ? ಒಂದು ಸ್ಮಾರ್ಟ್ ಫೋನ್ ತಗೊಂಡರೆ ಒಂದು ಕೇಜಿ ಈರುಳ್ಳಿ ಉಚಿತ ! ಈಗ ದೇಶದಲ್ಲಿ ಈರುಳ್ಳಿ ಅಭಾವದಿಂದ ರೇಟು ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಒಂದು ಕೆಜಿ ಈರುಳ್ಳಿ 200 ರೂಪಾಯಿವರೆಗೆ ಇದೆ. ದೊಡ್ಡ ಗಾತ್ರದ ಈರುಳ್ಳಿ 180 ರೂಪಾಯಿ ಇದ್ದರೆ , ಮಧ್ಯಮ ಗಾತ್ರದ ಹಾಗೂ ಸಣ್ಣ ಗಾತ್ರದ ಈರುಳ್ಳಿ 200 ರೂಪಾಯಿ ಇದೆ.
ಇಂತಹ ಸಮಯದಲ್ಲಿ ತಂಜಾವೂರಿನ ಅಂಗಡಿಯವನು ಈ ಸಮಯವನ್ನು ಸದುಪಯೋಗ ಮಾಡಿಕೊಂಡು ಸ್ಮಾರ್ಟ್ ಫೋನ್ ತಗೊಂಡರೆ ಒಂದು ಕೇಜಿ ಈರುಳ್ಳಿ ಕೊಡುತ್ತಿದ್ದಾನೆ. ಈರುಳ್ಳಿ ಕೊಡುವುದಕ್ಕಾಗಿ ಜನರು ಸ್ಮಾರ್ಟ್ ಫೋನ್ ತಗೊಂಡರಾ ಅಥವಾ ಕುತೂಹಲದಿಂದ ಜನ ಖರೀದಿಸಿದರಾ ಎಂಬುದು ಗೊತ್ತಾಗುತ್ತಿಲ್ಲ.
ಜನ ಮರುಳೋ ಜಾತ್ರೆ ಮರುಳೋ ? ಎಷ್ಟು ಸಾವಿರ ರೂಪಾಯಿ ಆದರೂ ಪರವಾಗಿಲ್ಲ ಆದರೆ ಒಂದು ರೂಪಾಯಿ ಉಚಿತ ಇದ್ದರೆ ಅದನ್ನು ಜನರು ಖರೀದಿಸುತ್ತಾರೆ . ಇದು ಜನಗಳ ಮನಸ್ಥಿತಿ.