ಇಡೀ ವಿಶ್ವದಲ್ಲಿ ಶನಿಯ ಪ್ರಭಾವಕ್ಕೆ ಒಳಗಾಗದವರು ಯಾರು ಇಲ್ಲ, ಅದಕ್ಕೆ ಶಿವನೂ ಸಹ ಹೊರತಲ್ಲ, ಆದರೆ ಒಂದು ಹೆಚ್ಚುಗಾರಿಕೆ ಏನೆಂದರೆ, ಶನಿಯು ತನ್ನ ಗುರುವಾದ ಶಿವನ ಬಳಿ ಬಂದು ತನ್ನ ಪ್ರಭಾವ ತೋರಿಸುವ ಸಮಯ ಬಂದಿದೆ ನನಗೆ ಅಪ್ಪಣೆ ನೀಡಿ, ಕಾಲಾವಕಾಶ ಕೊಡಿ ಎಂದು ಕೇಳಿದ್ದು ಮಾತ್ರ ಶಿವನನ್ನು.
ಹೀಗೆ ಶನಿಯ ಏಳೂವರೆ ವರ್ಷದ ಸಾಡೆಸಾತಿಗೆ ಶಿವ ಒಪ್ಪಿಗೆ ನೀಡಲಿಲ್ಲ, ಸಿಕ್ಕಾಪ್ಟಟ್ಟೆ ಚೌಕಾಸಿ ಸಹ ಈ ವಿಚಾರವಾಗಿ ನಡೆಯಿತು, ಇದರ ಕುರಿತು ವಿವಿಧ ಪುರಾಣಗಳು ವಿವಿಧ ಕತೆಗಳನ್ನು ಹೇಳುತ್ತದೆ, ಅದರಲ್ಲಿ ಒಂದೇ ರೀತಿ ಇರುವ ಸ್ವಾರಸ್ಯಕರವಾದ ಎರಡು ಕತೆಗಳನ್ನು ನಿಮ್ಮ ಮುಂದೆ ಇಡುತ್ತೇವೆ.
ಶನಿಯ ಕೋರಿಕೆಗೆ ಶಿವನು ಕೇವಲ ಏಳೂವರೆ ನಿಮಿಷ ತನ್ನ ಮೇಲೆ ಶನಿ ಪ್ರಭಾವ ಇರಬೇಕೆಂದು ಹೇಳಿದನು. ಇದಕ್ಕೆ ಶನಿ ದೇವನು ಸಹ ಒಪ್ಪಿದನು. ಶನಿಯ ಮುಂದೆ ಕುಳಿತರೆ ಏನಾಗುವುದೋ ಎಂದು ತಿಳಿದ ಶಿವನು ಅಲ್ಲಿಂದ ಅದೃಶ್ಯನಾಗಿ ಒಂದು ಕತ್ತೆಯ ಹೊಟ್ಟೆಯಲ್ಲಿ ಹೋಗಿ ಕುಳಿತನು. ಶನಿ ಶಿವ ಪ್ರತ್ಯಕ್ಷನಾಗಬಹುದೆಂದು ಅಲ್ಲಿ ನಿಂತೇ ಇದ್ದನು. ಏಳೂವರೆ ನಿಮಿಷದ ನಂತರ ಶಿವನು ಪ್ರತ್ಯಕ್ಷನಾಗಿ ಶನಿಯ ಮುಂದೆ ನಿಂತನು.
ಇದೇ ಮಾದರಿಯ ಇನ್ನೊಂದು ದಂತಕತೆಯಲ್ಲಿ ಶಿವನು ಶನಿಗೆ ನಾಳೆ ಬಾ ಎಂದು ಹೇಳಿ, ಭೂಲೋಕದ ಒಂದು ಕಗ್ಗಾಡಿಗೆ ಬಂದು, ಯಾರು ಪ್ರವೇಶಿಸಲಾಗದ ಒಂದು ಗುಹೆಯನ್ನು ಹೊಕ್ಕನಂತೆ. ಅಲ್ಲಿ ಶಿವನು ಏಳೂವರೆ ದಿನಗಳ ಕಾಲ (ಶನಿಯ ಕೋರಿಕೆಯಂತೆ) ಶನಿಯ ಕೈಗೆ ಸಿಗಬಾರದು ಎಂದು ಅವಿತು ಕೊಂಡಿದ್ದನಂತೆ. ಏಳೂವರೆ ದಿನಗಳ ಗಡುವು ಮುಕ್ತಾಯವಾದ ನಂತರ ಶಿವನು ಹೊರಗೆ ಬಂದನಂತೆ.
ಈ ಎರಡು ಸಂದರ್ಭಗಳು ಬೇರೆಯಾದರು ಶಿವನ ಪ್ರಶ್ನೆಗೆ ಶನಿಯ ಪ್ರತ್ಯುತ್ತರ ಈ ಸಂದರ್ಭದಲ್ಲಿ ಹೀಗಿದೆ :- ಶಿವ ನೋಡಿದೆಯಾ ಶನಿ ನಿನ್ನ ಪ್ರಭಾವಕ್ಕೆ ನಾನು ಸಿಗಲಿಲ್ಲ ಎಂದಾಗ, ಶನಿಯು ಮನ್ನಿಸಿ ಮಹಾದೇವ ನಾನು ಈಗಾಗಲೆ ನಿಮ್ಮ ಮೇಲೆ ನನ್ನ ಪ್ರಭಾವವನ್ನು ತೋರಿಸಿಬಿಟ್ಟೆ ಎಂದನಂತೆ.
ಅದು ಹೇಗೆ? ಎಂದು ಶಿವ ಕೇಳಿದಾಗ, ಶನಿಯು ಇಡೀ ಜಗತ್ತಿಗೆ ತಂದೆಯಾದ ನೀವು ನನ್ನ ಪ್ರಭಾವಕ್ಕೆ ಹೆದರಿ ಓಡಿ ಹೋಗಿ ಅವಿತುಕೊಂಡಿರೆಂದರೆ, ನಿಮ್ಮ ಮೇಲೆ ನನ್ನ ಪ್ರಭಾವ ಕೆಲಸ ಮಾಡದೆ ಇನ್ಯಾವುದು ತಾನೇ ಕೆಲಸ ಮಾಡಿತು ಎಂದು ಕೇಳಿದನಂತೆ.
ಶನಿಯ ಪ್ರಾಮಾಣಿಕತೆಗೆ ಮೆಚ್ಚಿದ ಶಿವನು ಶನಿಗೆ ಇನ್ನು ಮುಂದೆ ಶನೀಶ್ವರ ಎಂದು ಸಹ ಕರೆಯುವಂತಾಗಲಿ ಎಂದು ಹರಸಿ ಕಳುಹಿಸಿಕೊಟ್ಟನಂತೆ.
ಇನ್ನೂ ಕುತೂಹಲಕಾರಿ ವಿಚಾರವೆಂದರೆ, ಶನಿಯು ಪ್ರಪಂಚದಲ್ಲಿ ಎಲ್ಲರೂ ತನ್ನ ಪ್ರಭಾವಕ್ಕೆ ಒಳಗಾಗಬೇಕು ಎಂಬ ವರವನ್ನು ಈ ಮೊದಲೆ ಕೇಳಿದಾಗ ಅದಕ್ಕೆ ತ್ರಿಮೂರ್ತಿಗಳ ಆದಿಯಾಗಿ ಏಳು ಲೋಕದಲ್ಲಿರುವವರು ತಮ್ಮ ಜೀವನದಲ್ಲಿ ಏಳೂವರೆ ವರ್ಷಗಳ ಸಾಡೆಸಾತಿಗೆ ಗುರಿಯಾಗಲೇಬೇಕು ಎಂದು ಹೇಳಿ ತಥಾಸ್ತು ಹೇಳಿದ್ದು, ನಮ್ಮ ಮಹಾಶಿವನೇ.