ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಬಗ್ಗೆ ಈ ಮಾಹಿತಿ ತಿಳಿದರೆ ಅಚ್ಚರಿ ಪಡುತ್ತೀರಾ..!!

0
2272
Loading...
Loading...
Loading...

ಕರ್ನಾಟಕ ರತ್ನ, ಲೋಕ ಜಂಗಮ, ನಡೆದಾಡುವ ದೇವರು, ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಳಾದ ಡಾ|| ಶ್ರೀ. ಶಿವಕುಮಾರ ಸ್ವಾಮಿಗಳು ಹುಟ್ಟಿದ್ದು ಎಪ್ರಿಲ್ ೧, ೧೯೦೮ರಲ್ಲಿ ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ೧೩ನೇ ಮಗು ಶಿವಣ್ಣನವರಾಗಿ ಜನಿಸಿದರು. ಹೊನ್ನೆಗೌಡ ದಂಪತಿಗಳಿಗೆ ಎಂಟು ಜನ ಗಂಡು ಮಕ್ಕಳು ಹಾಗೂ ಐದು ಹೆಣ್ಣು ಮಕ್ಕಳು, ಎಲ್ಲರಿಗಿಂತಲೂ ಕಿರಿಯರಾದ ಶಿವಣ್ಣನವರೆಂದರೆ ತಂದೆ ತಾಯಿಗಳಿಗೆ ಅಪಾರ ಪ್ರೀತಿ.ವೀರಾಪುರದಲ್ಲಿಯೇ ಇದ್ದ ಕೂಲಿಮಠ ದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು. ಅನಂತರ ಪ್ರಾಥಮಿಕ ಶಾಲೆಗಾಗಿ ಪಕ್ಕದಲ್ಲಿಯೇ ಇರುವ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ತಮ್ಮ ಶಾಲಾ ಪ್ರಾಥಮಿಕಾ ಶಾಲಾ ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಡ ಶಿವಣ್ಣ ಅನಂತರ ಬೆಳೆದಿದ್ದು ಅಕ್ಕನ ಆಸರೆಯಲ್ಲಿ. ತುಮಕೂರು ಬಳಿ ಇರುವ ನಾಗವಲ್ಲಿ ಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದ ಶಿವಣ್ಣ ೧೯೨೨ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು ೧೯೨೬ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು. ೧೯೨೭ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳವರೊಡನಾಟ ಆಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು.

ಬೆಂಗಳೂರಿನಲ್ಲಿ ‘ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮ ಛತ್ರ’ ದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಶಿವಣ್ಣನವರು ಶಿಸ್ತುಬದ್ಧವಾದ ಕಟ್ಟು ನಿಟ್ಟಾದ ವಿದ್ಯಾರ್ಥಿ ಜೀವನ ನಡೆಸಿದರು. ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟವಂತೂ ಮುಂದುವರೆದೇ ಇತ್ತು. ಹಿರಿಯ ಗುರುಗಳಾದ ಶ್ರೀ ಉದ್ಧಾನ ಸ್ವಾಮಿಜಿಗಳ ಹಾಗು ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನವರಿಗೆ ಒಂದು ಹಿತಾನುಭೂತಿ ನೀಡುತ್ತಿತು. ಶಿವಣ್ಣನವರು ಎಲ್ಲ ಸಮಯಗಳಲ್ಲೂ ಮಠದ ಹಿತವನ್ನು ಬಯಸುತ್ತ ಮಠಕ್ಕೆ ಬಂದು ಹೋಗಿ ಮಾಡುತ್ತಿದ್ದರು, ಎಷ್ಟರ ಮಟ್ಟಿಗೆ ಎಂದರೆ ಇಡೀ ತುಮಕೂರು ಜಿಲ್ಲೆ ಒಮ್ಮೆ ಭೀಕರ ಪ್ಲೇಗ್ ರೋಗಕ್ಕೆ ತತ್ತರಿಸಿತು ಹಾಗಿದ್ದಾಗ್ಯೂ ಶಿವಣ್ಣನವರ ಹಾಗು ಮಠದ ಒಡನಾಟ ಎಂದಿನತೆಯೇ ಇತ್ತು. ಶಿವಕುಮಾರ ಸ್ವಾಮಿಗಳು ತಮ್ಮ ಪ್ರಾಥಮಿಕ ಶಿಕ್ಷಣ ಪಡೆದಿದ್ದು ವೀರಾಪುರ ಮತ್ತು ನಾಗವಲ್ಲಿಯಲ್ಲಿ, ಸರ್ಕಾರಿ ಪ್ರೌಢ ಶಾಲೆ ತುಮಕೂರಿನಲ್ಲಿ ಪ್ರೌಢ ಶಿಕ್ಷಣ ಪಡೆದ ನಂತರ ಬೆಂಗಳೂರು ಯುನಿವೆರ್ಸಿಟಿಯಲ್ಲಿ ಡಿಗ್ರಿ ಪಡೆದರು.

ಶ್ರೀ ರಕ್ಷೆಯಿಂದ ಉತ್ತಮವಾಗಿ ನಡೆಯುತ್ತಿದ್ದ ಸಿದ್ದಗಂಗಾ ಮಠಕ್ಕೆ ೧೯೩೦ರಲ್ಲಿ ಬರ ಸಿಡಿಲು ಬಡಿದಂತಹ ಒಂದು ಘಟನೆ ನಡೆಯುತ್ತದೆ. ಅದೇನೆಂದರೆ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಆಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನವರ ಕಡೆ ಉದ್ಧಾನ ಸ್ವಾಮಿಜಿಗಳ ದೃಷ್ಟಿ ಹರಿಯುತ್ತದೆ. ಅಷ್ಟರಲ್ಲಾಗಲೇ ಶಿವಣ್ಣನವರ ಹಿನ್ನೆಲೆಯ ಅರಿವಿದ್ದ ಉದ್ಧಾನ ಶ್ರೀಗಳು ಯಾರ ಹೇಳಿಕೆಗೂ ಕಾಯದೆ ಎಲ್ಲರ ಸಮ್ಮುಖದಲ್ಲಿ ಶಿವಣ್ಣನೇ ಈ ಮಠದ ಉತ್ತರಾಧಿಕಾರಿ ಎಂದು ಘೋಷಿಸಿ ಬಿಡುತ್ತಾರೆ. ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂಧರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿಧ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು.

ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದಿದ್ದೂ ಉಂಟು. ಬರಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ದಿನ ನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗು ಗಣ್ಯರ ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿಲ್ಲದ ಕಾರ್ಯ ಪಟ್ಟಿಯೇ ಇರುತ್ತಿತ್ತು. ಆರಂಭದ ದಿನಗಳಲ್ಲಿ ‘ಶ್ರೀಗಳು ಇವನ್ನೆಲ್ಲ ನಿಭಾಯಿಸಲು ಸಾಧ್ಯವಿಲ್ಲ ಎಂಬ ಆಡು ನುಡಿಗಳೂ ಕೇಳಿಬಂದಿದ್ದವು. ಇದ್ಯಾವುದಕ್ಕೂ ಧೃತಿಗೆಡದ ಶ್ರೀಗಳು ಪೂಜ್ಯ ಲಿ. ಶ್ರೀ ಅಟವೀ ಸ್ವಾಮಿಗಳ ಹಾಗು ಲಿ. ಶ್ರೀ ಉದ್ಧಾನ ಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ. ಅಷ್ಟರಲ್ಲಾಗಲೇ ಸ್ವಾತಂತ್ರ್ಯ ಕಂಡು ಸ್ವಾಯತ್ತತೆಯೆಡೆಗೆ ಅಡಿಯಿಡುತ್ತಿದ್ದ ಭಾರತ ಶಿಕ್ಷಣದ ಮಹತ್ವವನ್ನು ದೇಶದೆಲ್ಲೆ ಪಸರಿಸಲು ಹಾಗು ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಲು ಸರ್ಕಾರವೂ ಸೇರಿದಂತೆ ಅನೇಕ ಮಹನೀಯರು ಮೊದಲಾದರು.

ಆದರೆ ಸಿದ್ದಗಂಗೆಯಲ್ಲಿ ಅದಾಗಲೇ ಅವೆಲ್ಲವೂ ಕಾರ್ಯರೂಪಕ್ಕೆ ಬಂದಾಗಿತ್ತು. ಸಾಲದ್ದಕ್ಕೆ ಅಲ್ಲಿ ಕಲಿಯುತ್ತಿದ್ದ ಬಹುಪಾಲು ಎಲ್ಲರೂ ಗ್ರಾಮೀಣ ಮಕ್ಕಳೇ. ಈ ಕಾರ್ಯ ರಾಷ್ಟ್ರ ಮಟ್ಟದಲ್ಲೂ ಬಹಳ ಶ್ಲಾಘನೆಗೆ ಒಳಗಾಗಿ, ಸಿದ್ದಗಂಗೆಯ ಕೀರ್ತಿ ಎಲ್ಲೆಡೆ ಹರಡಲು ಪ್ರಾರಂಭವಾಯಿತು. ಸಿದ್ದಗಂಗೆಯ ಕೀರ್ತಿ ಪಸರಿಸಿದಂತೆ ಅಲ್ಲಿನ ಭಕ್ತ ವರ್ಗವೂ, ವಿಧ್ಯಾರ್ಥಿ ಸಂಕುಲವೂ ಕಾಲಕ್ರಮೇಣ ಹೆಚ್ಚುತ್ತಾ ಹೋಯಿತು. ಇದು ಸ್ವಾಮೀಜಿಯವರ ದೂರದರ್ಶಿತ್ವಕ್ಕೆ ಒಂದು ಉದಾಹರಣೆ. ಪರಮಪೂಜ್ಯರಾದ ಡಾ. ಶಿವಕುಮಾರ ಸ್ವಾಮೀಜಿಯವರು ಜಗತ್ತು ಕಂಡ ಒಂದು ಅಚ್ಚರಿ. ತಮ್ಮ ವೈಯುಕ್ತಿಕ ಜೀವನವನ್ನು ತ್ಯಾಗ ಮಾಡಿ ಸುಮಾರು 80 ವರ್ಷಗಳ ಕಾಲ ನಿರಂತರವಾಗಿ ಅವಕಾಶವಂಚಿತ ಮಕ್ಕಳಿಗೆ ಜಾತಿ, ಮತ, ಅಂತಸ್ತುಗಳನ್ನೆಣಿಸದೇ ಅನ್ನ ದಾಸೋಹದ ಜೊತೆಗೆ ಅಕ್ಷರವನ್ನು ಕಲಿಸಿ ಅವರ ಬಾಳು ಉತ್ತಮ ಮಾರ್ಗದಲ್ಲಿ ಸಾಗಲು ಅಡಿಗಲ್ಲು ಹಾಕಿಕೊಟ್ಟ ಸಿದ್ದಗಂಗೆಯ ಸಿದ್ದಿಪುರುಷರು ಪೂಜ್ಯ ಸ್ವಾಮೀಜಿಯವರು.

Loading...

LEAVE A REPLY

Please enter your comment!
Please enter your name here