ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ?

0
5351

ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ? ಇತ್ತೀಚೆಗೆ ಜನರು ಅನುಸರಿಸುತ್ತಿರುವ ಕೆಟ್ಟ ಜೀವನಶೈಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಅದರಲ್ಲಿ ಮುಖ್ಯವಾದುದು ಹೃದಯ ಸಂಬಂಧಿತ ಸಮಸ್ಯೆ. ಇದರಿಂದಾಗಿಯೇ ಮರಣ ಪ್ರಮಾಣ ಸಹ ಹೆಚ್ಚಾಗ್ತಿದೆ. ಹೀಗಾಗದಿರಲು ಏನು ಮಾಡ್ಬೋದು ಅನ್ನೋ ಮಾಹಿತಿ ಇಲ್ಲಿದೆ.

ಮನುಷ್ಯನ ಜೀವಂತವಾಗಿ ನಿಂತಿರುವುದು ಹೃದಯದ ಆಧಾರದ ಮೇಲೆಯೇ. ಹೃದಯದ ಬಡಿತ ನಿಂತಿತು ಎಂದರೆ ವೈಜ್ಞಾನಿಕವಾಗಿ ಆತನ ಆಯಸ್ಸು ಮುಗಿಯಿತು ಎಂದರ್ಥ. ಹೀಗಾಗಿಯೇ ಹೃದಯದ ಆರೋಗ್ಯವನ್ನು ಯಾವಾಗಲೂ ಚೆನ್ನಾಗಿ ನೋಡಿಕೊಳ್ಳಬೇಕು. ಆದರೆ ಇತ್ತೀಚಿಗೆ ಕೆಟ್ಟ ಜೀವನಶೈಲಿಯಿಂದ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗ್ತಿವೆ. ಹೀಗಾಗಬಾರದು ಅಂದ್ರೆ ಏನ್ಮಾಡ್ಬೇಕು ಅನ್ನೋ ಮಾಹಿತಿ ಇಲ್ಲಿದೆ.

ವ್ಯಾಯಾಮ ತಪ್ಪಿಸಬೇಡಿ: ಆರೋಗ್ಯವಾಗಿರಬೇಕಾದರೆ ಯಾವಾಗಲೂ ದೈಹಿಕ ಚಟುವಟಿಕೆ (Exercise)ಗಳಲ್ಲಿ ಭಾಗವಹಿಸಬೇಕಾದುದು ತುಂಬಾ ಮುಖ್ಯ. ಆದರೆ ಇತ್ತೀಚಿಗೆ ಒತ್ತಡದ ಜೀವನಶೈಲಿಯಿಂದ ವ್ಯಾಯಾಮಕ್ಕೆ ಸಮಯ ನೀಡಲು ಹೆಚ್ಚಿನವರಿಗೆ ಸಾಧ್ಯವಾಗುತ್ತಿಲ್ಲ. ಆದರೆ ಅತಿಯಾದ ಒತ್ತಡ, ಅನಾರೋಗ್ಯದ ಮಧ್ಯೆ ವ್ಯಾಯಾಮ ಮಾಡಬೇಕಾದುದು ತುಂಬಾ ಮುಖ್ಯ. ಇಲ್ಲದಿದ್ದರೆ ಕಾಯಿಲೆಗಳು ಬೇಗನೇ ದೇಹವನ್ನು ಕಂಗೆಡಿಸಿಬಿಡುತ್ತದೆ. ಹೀಗಾಗಬಾರದು ಅಂದ್ರೆ ನಿಯಮಿತವಾಗಿ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬೇಕು. ವಾಕಿಂಗ್, ಜಾಗಿಂಗ್ ಮೊದಲಾದ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.

ಮಾಂಸವನ್ನು ಕಡಿಮೆ ಸೇವಿಸಿ ಸೊಪ್ಪು ತರಕಾರಿ ಹೆಚ್ಚು ತಿನ್ನಿ: ಆಹಾರ ಅವರವರ ಆಯ್ಕೆಯಾದರೂ ಆ ಮೂಲಕ ದೇಹಕ್ಕೆ ಹೋಗುವ ಪ್ರೋಟೀನ್‌, ಪೋಷಕಾಂಶಗಳ ಪ್ರಮಾಣ ವ್ಯತ್ಯಸ್ಥವಾಗಿರುತ್ತದೆ. ಹೀಗಾಗಿ ನಾನು ಸಸ್ಯಾಹಾರಿ, ಮಾಂಸಾಹಾರಿ ಅನ್ನುವ ಮೊದಲು ಆರೋಗ್ಯಕ್ಕೆ ಅವೆಷ್ಟು ಉತ್ತಮ ಎಂಬುದನ್ನು ತಿಳಿದುಕೊಳ್ಳಬೇಕು. ಮಾಂಸಾಹಾರಕ್ಕಿಂತಲೂ ಸಸ್ಯಾಹಾರದಲ್ಲಿ ಪೋಷಕಾಂಶಗಳ ಪ್ರಮಾಣ ಹೇರಳವಾಗಿದೆ ಎಂದು ಅಧ್ಯಯನಗಳು ತೋರಿಸಿವೆ. ಹೀಗಾಗಿ ಮಾಂಸಾಹಾರ ಮಿತಗೊಳಿಸಿ, ಸೊಪ್ಪು, ತರಕಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ.

ಆರೋಗ್ಯಕರ ಆಹಾರ ಸೇವಿಸಿ: ಜಂಕ್‌ಫುಡ್‌, ಕರಿದ ತಿಂಡಿಗಳು, ಫಾಸ್ಟ್‌ ಫುಡ್‌ ಇತ್ತೀಚಿನ ಜನರಿಗೆ ಹೆಚ್ಚು ಇಷ್ಟವಾಗುತ್ತದೆ. ಆದ್ರೆ ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ದೂರವಿಡುವುದು ತುಂಬಾ ಒಳ್ಳೆಯದು. ಇಂಥಾ ಜಂಕ್‌ಫುಡ್ ಬದಲಿಗೆ ಆರೋಗ್ಯಕರ ತರಕಾರಿ, ಹಣ್ಣುಗಳನ್ನು ಹೆಚ್ಚು ತಿನ್ನಬೇಕು. ಒಣ ಬೀಜಗಳು, ಧಾನ್ಯಗಳ ಸಹ ಹೃದಯದ ಆರೋಗ್ಯವನ್ನು ತುಂಬಾ ಚೆನ್ನಾಗಿಡುತ್ತದೆ. ಹೆಚ್ಚಿನವರು ಬ್ರೇಕ್‌ಫಾಸ್ಟ್‌ಗೆ ಬೇಯಿಸಿದ ಮೊಟ್ಟೆ, ಸ್ವೀಟ್ಸ್‌ಗಳನ್ನೆಲ್ಲಾ ತಿನ್ನುತ್ತಾರೆ. ಆದರೆ ಹೀಗೆ ಮಾಡುವ ಬದಲು ಬ್ರೆಡ್‌, ಓಟ್ಸ್‌ ಮೊದಲಾದವುಗಳನ್ನು ತಿನ್ನಬಹುದು.

ಟಿವಿ ನೋಡುವ ಬದಲು ಹೆಚ್ಚು ನಿದ್ರೆ ಮಾಡಿ: ಇತ್ತೀಚಿನ ದಿನಗಳಲ್ಲಿ ಟಿವಿ ಹಾಗೂ ಮೊಬೈಲ್ ನೋಡುತ್ತಾ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡುವುದು ಜನರಿಗೆ ಅಭ್ಯಾಸವಾಗಿಬಿಟ್ಟಿದೆ. ಹೀಗೆ ಮಾಡುವ ಮೂಲಕ ಆರೋಗ್ಯಕ್ಕೆ ಬೇಕಾದಷ್ಟು ನಿದ್ದೆಯನ್ನು ಸಹ ಮಾಡುವುದಿಲ್ಲ. ಎಲ್ಲಾ ವಯಸ್ಸಿನವರು ಅವರ ವಯಸ್ಸಿಗೆ ತಕ್ಕಂತೆ ಆರೋಗ್ಯಕರ ನಿದ್ರೆಯನ್ನು ಪಡುವುದು ಮುಖ್ಯವಾಗಿದೆ. ವಯಸ್ಕರಿಗೆ ರಾತ್ರಿಗೆ ಏಳು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲದ ನಿದ್ರೆ ಹೃದಯರಕ್ತನಾಳದ ಕಾಯಿಲೆಯನ್ನು ತಡೆಗಟ್ಟಲು ಮುಖ್ಯವಾಗಿದೆ.

ತಂಬಾಕಿನಿಂದ ದೂರವಿರಿ: ಸಿಗರೇಟ್ ಸೇದುವುದು ಇತ್ತೀಚಿಗೆ ಟ್ರೆಂಡ್ ಆಗಿಬಿಟ್ಟಿದೆ. ಆದ್ರೆ ಇದ್ರಿಂದ ಆರೋಗ್ಯಕ್ಕಾಗುವ ತೊಂದ್ರೆ ಒಂದೆರಡಲ್ಲ. ಪ್ರತಿ ವರ್ಷ ಸುಮಾರು 1.35 ಮಿಲಿಯನ್ ಜನರು ತಂಬಾಕಿನಿಂದ ಸಾವನ್ನಪ್ಪುತ್ತಿದ್ದಾರೆ. ಸಿಗರೇಟ್ ಹೃದಯದ ಆರೋಗ್ಯದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತೆ ಅನ್ನೋದು ಅಧ್ಯಯನದಿಂದ ಸಾಬೀತಾಗಿದೆ. ಹೀಗಾಗಿ ಸಿಗರೇಟು ಸೇವನೆ ಅತ್ಯಂತ ಅಪಾಯಕಾರಿ. ರಸ್ತೆಯ ಕಲುಷಿತ ಹೊಗೆಯಿಂದಲೂ ಸಹ ಹೃದಯದ ನಾಳಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಮನೆಯಿಂದ ಹೊರ ಹೋಗುವಾಗ ಯಾವಾಗಲೂ ಮಾಸ್ಕ್ ಧರಿಸುವುದು ಒಳ್ಳೆಯದು.

ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ: ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕೆಂದು ನೀವು ಬಯಸುವುದಾದರೆ ಆಗಾಗ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಮುಖ್ಯ. ಕನಿಷ್ಠ ವರ್ಷಕ್ಕೊಮ್ಮೆಯಾದರೂ ಇಡೀ ದೇಹದ ತಪಾಸಣೆ ಮಾಡಿಸಿ. ಇದರಿಂದ ಯಾವುದೇ ರೀತಿಯ ಕಾಯಿಲೆಯಿದ್ದರೂ ಪ್ರಾರಂಭಿಕ ಹಂತದಲ್ಲಿ ಗೊತ್ತಾಗುವುದರಿಂದ ಚಿಕಿತ್ಸೆ ಪಡೆಯಲು ಸುಲಭವಾಗುತ್ತದೆ. ಇದರಿಂದ ಭವಿಷ್ಯದಲ್ಲಾಗುವ ದೊಡ್ಡ ಅನಾಹುತವನ್ನು ತಡೆಗಟ್ಟಬಹುದು. ಕುಟುಂಬದಲ್ಲಿ ಹೃದಯ ಸಂಬಂಧಿಯ ಕಾಯಿಲೆಯ ಇತಿಹಾಸವಿದ್ದವರು ತಪ್ಪದೇ ಹೃದಯ ತಪಾಸಣೆ ಮಾಡಿಸುವುದು ಒಳ್ಳೆಯದು.

LEAVE A REPLY

Please enter your comment!
Please enter your name here