ರಾಗಿ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವಾರು ಪ್ರಯೋಜನ. ಸಿರಿಧಾನ್ಯಗಳಲ್ಲಿ ಒಂದಾಗರುವ ರಾಗಿಯನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಆರೋಗ್ಯಕ್ಕೆ ಹಲವು ಲಾಭಗಳು ಸಿಗುತ್ತದೆ. ಇದು ದೇಹಕ್ಕೆ ತಂಪು ಮತ್ತು ಶಕ್ತಿಯನ್ನು ನೀಡುವುದರ ಜೊತೆಗೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ರಾಗಿಗೆ ಇದೆ. ನಮ್ಮ ಆಹಾರ ಪದ್ದತಿಯಲ್ಲಿ ರಾಗಿ ಬಳಕೆ ಮಾಡುವುದರಿಂದ ಹಲವಾರು ಲಾಭಗಳು ಸಿಗಲಿದೆ.
ಪ್ರಯೋಜನ ಏನು? ಬಿಸಿಲಿನ ಬೇಗೆ ಪ್ರಾರಂಭವಾಗಿದೆ. ಮುಂಜಾವಿನಲ್ಲಿ ಟಿ ಮಾಡಿ ಕುಡಿಯುವ ಬದಲಾಗಿ ರಾಗಿ ಗಂಜಿಯನ್ನು ಸೇವಿಸಿದರೆ ದೇಹಕ್ಕೆ ತಂಪು ಮತ್ತು ಆರೋಗ್ಯಕರವಾಗಿರುತ್ತದೆ. ಬೇರೆ ಧಾನ್ಯಗಳಿಗಿಂತ ಕೊಬ್ಬಿನಾಂಶವು ತುಂಬಾ ಕಡಿಮೆ ಇರುತ್ತದೆ. ದೇಹಕ್ಕೆ ಅಗತ್ಯ ಇರುವ ಒಳ್ಳೆಯ ಕೊಬ್ಬನ್ನು ನೀಡುತ್ತದೆ.
ರಾಗಿಯು ಹೊಟ್ಟೆ ತುಂಬಿದಂತೆ ಮಾಡುವುದರ ಜೊತೆಗೆ ತಂಪನ್ನು ನೀಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಅನ್ನ, ಗೋಧಿ ಬದಲಿಗೆ ರಾಗಿ ಬಳಕೆ ಮಾಡಬಹುದು. ಮಕ್ಕಳಿಗೆ ಆಹಾರ ಕ್ರಮದಲ್ಲಿ ರಾಗಿ ನೀಡಿದರೆ ಅದರಿಂದ ಮೂಳೆಗಳು ಬಲಗೊಳ್ಳುವುದು ಮತ್ತು ಹಲ್ಲುಗಳು ಕೂಡ ಬಲಿಷ್ಠವಾಗುತ್ತದೆ. ರಾಗಿ ಜ್ಯೂಸ್, ದೋಸೆ, ರೊಟ್ಟಿ ಸೇವನೆಯಿಂದ ರಾಗಿಯಲ್ಲಿರುವ ಟ್ರೈಪ್ಟೊಫಾನ್ ಅಂಶ ನಿದ್ರಾಹೀನತೆ ಕಡಿಮೆ ಮಾಡಿ ಆರೋಗ್ಯಕಾರಿ ನಿದ್ರೆ ನೀಡುತ್ತದೆ.
ಬೆಳೆಯುವ ಮಕ್ಕಳಿಗೆ ರಾಗಿ ನೀಡಿದರೆ ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ, ಪ್ರೋಟಿನ್ ಜೊತೆಗೆ ಪೋಷಕಾಂಶಗಳನ್ನು ಒದಗಿಸುವ ಅಂಶವನ್ನು ಹೊಂದಿದೆ. ರಾಗಿಯಲ್ಲಿರುವ ಅಮಿನೋ ಆಮ್ಲವು ನೈಸರ್ಗಿಕ ಖಿನ್ನತೆ ನಿವಾರಣೆ ಹಾಗೂ ಮೈಗ್ರೇನ್ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ಒಳ್ಳೆಯದಾಗಿದೆ. ರಾಗಿಯಲ್ಲಿ ಇರುವಂತಹ ನಾರಿನಾಂಶವು ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡಲು ರಾಗಿಯಲ್ಲಿ ಇರುವಂತಹ ನಾರಿನಾಂಶವು ನೆರವಾಗಲಿದೆ. ಅಕ್ಕಿ ಮತ್ತು ಬೇರೆ ಧಾನ್ಯಗಳಿಗೆ ಹೋಲಿಕೆ ಮಾಡಿದರೆ ಇದರಲ್ಲಿ ಆಹಾರದ ನಾರಿನಾಂಶವು ಹೆಚ್ಚಾಗಿದೆ. ಇದರಿಂದ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳೂ ದೂರವಾಗುವುದು. ರಾಗಿ ತಿಂದರೆ ಅದು ಹೊಟ್ಟೆ ತುಂಬಿದಂತೆ ಮಾಡುವುದು ಹಾಗೂ ಪದೇ ಪದೇ ತಿನ್ನುವುದನ್ನು ಇದು ಕಡಿಮೆ ಮಾಡುವುದು. ಪಾಲಿಫೆನಾಲ್ ಅಂಶವು ರಾಗಿಯಲ್ಲಿದ್ದು, ಇದು ಮಧುಮೇಹಿಗಳಿಗೆ ಒಳ್ಳೆಯದು.
ಲೆಸಿಥಿನ್ ಮತ್ತು ಮೆಥಿಯೋನಿನ್ ಎನ್ನುವ ಅಮಿನೋ ಆಮ್ಲವು ಇದರಲ್ಲಿದ್ದು, ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಇದು ತಗ್ಗಿಸುವುದು ಹಾಗೂ ಯಕೃತ್ ಗೆ ಕೊಬ್ಬು ಕರಗಿಸಲು ನೆರವಾಗುವುದು. ಟ್ರೈಪ್ಟೊಫಾನ್ ಎನ್ನುವ ಮತ್ತೊಂದು ಅಮಿನೋ ಆಮ್ಲವು ಹಸಿವು ತಗ್ಗಿಸುವುದು. ರಾಗಿಯಲ್ಲಿ ಇರುವಂತಹ ಕಬ್ಬಿಣಾಂಶವು ರಕ್ತಹೀನತೆ ನಿವಾರಣೆ ಮಾಡಲು ನೆರವಾಗುವುದು ಹಾಗೂ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಣೆ ಮಾಡುವುದು. ಇದರಲ್ಲಿ ನೈಸರ್ಗಿಕ ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಇದ್ದು, ಇದರಿಂದ ಕಬ್ಬಿಣಾಂಶವು ಬೇಗನೆ ಹೀರಿಕೊಳ್ಳುವುದು.
ಗ್ಲುಟೇನ್ ಸೂಕ್ಷ್ಮತೆ ಇರುವವರಿಗೆ ರಾಗಿಯು ವರದಾನವಾಗಿದೆ. ಬೇರೆ ಧಾನ್ಯಗಳಲ್ಲಿ ಗ್ಲುಟೇನ್ ಅಂಶವು ಇದ್ದು, ರಾಗಿಯಲ್ಲಿ ಇದು ಶೂನ್ಯವಾಗಿದೆ. ಟ್ರೈಪ್ಟೊಫಾನ್ ಎನ್ನುವ ಅಮಿನೋ ಆಮ್ಲವು ರಾಗಿಯಲ್ಲಿ ಅಧಿಕ ಮಟ್ಟದಲ್ಲಿದ್ದು, ಇದು ನರ ವ್ಯವಸ್ಥೆಯನ್ನು ಉತ್ತಮಪಡಿಸುವುದು, ನೆನಪಿನ ಶಕ್ತಿ ಉತ್ತೇಜಿಸುವುದು ಮತ್ತು ಮನಸ್ಸನ್ನು ಶಾಂತವಾಗಿಸುವುದು.
ರಾಗಿಯು ಆತಂಕ ಮತ್ತು ನಿದ್ರಾಹೀನತೆ ಕಡಿಮೆ ಮಾಡಿ ಆರೋಗ್ಯಕಾರಿ ನಿದ್ರೆ ನೀಡುವುದು. ರಾಗಿಯಲ್ಲಿ ಇರುವಂತಹ ಟ್ರೈಪ್ಟೊಫಾನ್ ಅಂಶವು ನರಪ್ರೇಕ್ಷಕಗಳಲ್ಲಿ ಸೆರೊಟೊನಿನ್ ಮಟ್ಟವನ್ನು ಸಮತೋಲನಕ್ಕೆ ತರುವುದು. ಮನೆಯಲ್ಲೇ ರಾಗಿ ರೆಸಿಪಿಗಳನ್ನು ಮಾಡುವ ವಿಧಾನ : ರಾಗಿ ಕಂಜಿ(ಸಿಹಿ ಮತ್ತು ಉಪ್ಪು)
ಬೇಕಾಗುವ ಸಾಮಗ್ರಿಗಳು : ರಾಗಿ ¼ ಕಪ್, ನೀರು 11/2 ಕಪ್, ಸಿಹಿಗೆ, ಹಾಲು ½ ಕಪ್, ಸಕ್ಕರೆ-ರುಚಿಗೆ ತಕ್ಕಂತೆ, ಏಲಕ್ಕಿ ಹುಡಿ- ಚಿಟಿಕೆ, ಉಪ್ಪಿಗೆ, ಮಜ್ಜಿಗೆ 1 ಕಪ್, ಹಸಿ ಮೆಣಸು-1 ಕತ್ತರಿಸಿರುವುದು, ಕರಿಬೇವಿನ ಎಲೆಗಳು ಸ್ವಲ್ಪ, ಸಾಸಿವೆ-1/2 ಚಮಚ, ಇಂಗು-ಚಿಟಿಕೆ, ಉಪ್ಪು-ರುಚಿಕೆ ತಕ್ಕಷ್ಟು, ಎಣ್ಣೆ-1 ಚಮಚ.
ವಿಧಾನ : ಒಂದು ತವಾಗೆ ನೀರು ಮತ್ತು ರಾಗಿ ಹಿಟ್ಟು ಹಾಕಿ. ಇದನ್ನು ಸರಿಯಾಗಿ ತಿರುಗಿಸಿ ಮತ್ತು ಮುದ್ದೆಯಾಗದಂತೆ ನೋಡಿಕೊಳ್ಳಿ. ಮಧ್ಯಮ ಬೆಂಕಿಯಲ್ಲಿ ನೀವು ಇದನ್ನು ನಿರಂತರವಾಗಿ ತಿರುಗಿಸುತ್ತಾ ಕುದಿಸಿ. ಇದು ದಪ್ಪವಾದ ಬಳಿಕ ಬೆಂಕಿಯನ್ನು ಕಡಿಮೆ ಮಾಡಿ ಮತ್ತು ಐದು ನಿಮಿಷ ಕಾಲ ಮತ್ತೆ ಬೇಯಿಸಿ.
ಇದನ್ನು ಎರಡು ಭಾಗವನ್ನಾಗಿ ಮಾಡಿಕೊಳ್ಳಿ. ಒಂದು ಸಿಹಿ ಮತ್ತು ಇನ್ನೊಂದು ಉಪ್ಪು. ಸಿಹಿಗೆ: ಹಾಲು, ಸಕ್ಕರೆ ಮತ್ತು ಏಲಕ್ಕಿ ಹುಡಿ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಬಿಸಿಯಾಗಿರುವಾಗಲೇ ಸೇವಿಸಿ. ಸಕ್ಕರೆ ಬದಲಿಗೆ ಬೆಲ್ಲ ಕೂಡ ಹಾಕಬಹುದು.
ಉಪ್ಪು: ಇದು ತಣ್ಣಗಾದ ಬಳಿಕ ಸ್ವಲ್ಪ ಉಪ್ಪು ಮತ್ತು ಮಜ್ಜಿಗೆ ಹಾಕಿ. ಒಂದು ತವಾದಲ್ಲಿ ಎಣ್ಣೆ ಹಾಕಿಕೊಂಡು, ಅದಕ್ಕೆ ಸಾಸಿವೆ, ಇಂಗು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ. ಈ ಒಗ್ಗರಣೆಯನ್ನು ರಾಗಿ ಮಿಶ್ರಣಕ್ಕೆ ಹಾಕಿ. ಇದನ್ನು ತಂಪಾಗಿರುವಾಗಲೇ ಸೇವಿಸಿ.