ಕಡು ಬಡವನಿಗೂ ತನ್ನ ಹರಕೆಯನ್ನು ಸಲ್ಲಿಸಲು ಅವಕಾಶ ಇರುವ ವಿಶಿಷ್ಟ ಸೂರ್ಯ ದೇವಾಲಯ.

0
3487

ಕಡು ಬಡವನಿಗೂ ತನ್ನ ಹರಕೆಯನ್ನು ಸಲ್ಲಿಸಲು ಅವಕಾಶ ಇರುವ ವಿಶಿಷ್ಟ ಸೂರ್ಯ ದೇವಾಲಯ. ನಮಗೆ ಏನೇ ತೊಂದರೆ ಬಂದರೂ ಮೊದಲು ದೇವರನ್ನು ಬೇಡಿಕೊಳ್ಳುವುದು ವಾಡಿಕೆ. ಯಾಕೆಂದರೆ ಮನುಷ್ಯರಿಗೆ ದೇವರ ಮೇಲೆ ಅಪಾರ ಭಕ್ತಿ ಹಾಗೂ ನಂಬಿಕೆ. ದೇವರು ನಮ್ಮ ಕಷ್ಟಗಳನ್ನು ಪರಿಹರಿಸಿದರೆ ನಮ್ಮ ಶಕ್ತಿಗೆ ಅನುಸಾರವಾಗಿ ಹರಿಕೆ ಕಾಣಿಕೆ ಸಲ್ಲಿಸುವುದು ಹಿಂದಿನಿಂದಲೂ ಬಂದ ವಾಡಿಕೆ.

ಕೆಲವರು ಹುಂಡಿ ಕಾಣಿಕೆ, ಚಿನ್ನ ವಜ್ರ ವೈಢೂರ್ಯಗಳನ್ನು ಅರ್ಪಿಸಿದರೆ ಇನ್ನು ಕೆಲವರು ನಗ ನಾಣ್ಯ ಜೊತೆ ರೇಷ್ಮೆ ಸೇರಿ ಅಥವಾ ರುಮಾಲು, ದೇವಸ್ಥಾನದ ಜೀರ್ಣೋದ್ಧಾರ ಎಲೆಗಳು ಎಂದೆಲ್ಲ ಹರಕೆ ಕಟ್ಟಿಕೊಳ್ಳುತ್ತಾರೆ. ದೇವಸ್ಥಾನಗಳು ಶ್ರೀಮಂತವು ಎನ್ನುವುದರಲ್ಲಿ ಎರಡು ಮಾತಿಲ್ಲ ಆದರೆ ಇಲ್ಲೊಂದು ದೇವಸ್ಥಾನವಿದೆ. ಇಲ್ಲಿ ಹರಕೆಗೆ ಬರಿ ಮಣ್ಣಿನ ಬೊಂಬೆ ಕೊಟ್ಟರೆ ಸಾಕು ಕಷ್ಟಗಳು ನಿವಾರಣೆಯಾಗುತ್ತವೆಯಂತೆ, ಅಂದುಕೊಂಡ ಕೆಲಸಗಳು ನೆರವೇರುತ್ತವೆಯಂತೆ ಇದು ಎಷ್ಟೋ ಭಕ್ತರ ಅಭಿಪ್ರಾಯ ಕೂಡ.


‌ ‌ ‌ ‌ ‌ ‌
ಸದಾಶಿವ ರುದ್ರ ದೇವಸ್ಥಾನ ‘ಸೂರ್ಯ ದೇವಸ್ಥಾನ’ ಎಂದೇ ಪ್ರಖ್ಯಾತಿಯಾಗಿದೆ. ಏನಿದು, ಹೆಸರು ವಿಚಿತ್ರವಾಗಿದೆ ಎಂದನಿಸುತ್ತಿದೆಯಲ್ಲವೆ. ಹೌದು, ಇದೊಂದು ವಿಶಿಷ್ಟ ದೇವಸ್ಥಾನ. ಈ ದೇವಸ್ಥಾನವಿರುವುದು ಕರ್ನಾಟಕದಲ್ಲಿಯೇ ಹಾಗೂ ಇಲ್ಲಿ ಹರಕೆ ಈಡೇರಿದ ನಂತರ ದೇವರಿಗೆ ವಿಶಿಷ್ಟ ರೀತಿಯ ಉಡುಗೊರೆಗಳನ್ನೇ ಅರ್ಪಿಸಬೇಕು. ಅಷ್ಟೊಂದು ಪ್ರಭಾವಶಾಲಿ ಅಥವಾ ಶಕ್ತಿಶಾಲಿಯಾಗಿದೆಯಂತೆ ಈ ದೇವಸ್ಥಾನ. ಹೀಗೆಂದು ಇಲ್ಲಿಗೆ ಬರುವ ಭಕ್ತರ ಅಚಲವಾದ ನಂಬಿಕೆ.

ಈ ದೇವಸ್ಥಾನವನ್ನು ಸದಾಶಿವ ರುದ್ರನ ದೇವಸ್ಥಾನ ಎಂದು ಕರೆಯಲಾಗುತ್ತದೆ ಹಾಗೂ ಮಾಧ್ವ ಸಂಪ್ರದಾಯದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯುತ್ತವೆ. ಬ್ರಾಹ್ಮಣ ಕುಲದ ಮಾಧ್ವ ಸಮುದಾಯದವರು ವೈಷ್ಣವ ಪಂಗಡಕ್ಕೆ ಸೇರಿದವರಾಗಿದ್ದು ಇವರು ಶಿವನನ್ನು ರುದ್ರನೆಂದು ಸಂಭೋದಿಸಿ ಪೂಜಿಸುತ್ತಾರೆ. ಹೀಗಾಗಿ ಇದೊಂದು ಮಾಧ್ವ ಸಂಪ್ರದಾಯದ ಶಿವನ ವಿಶೇಷ ದೇವಸ್ಥಾನವೆಂದೆ ಹೇಳಬಹುದು. ‌
ಶ್ರೀ ಸದಾಶಿವ ದೇವಸ್ಥಾನ ಒಂದು ವಿಶಿಷ್ಟ ಧಾರ್ಮಿಕ ಆಚರಣೆಗೆ ಪ್ರಸಿದ್ಧಿ ಪಡೆದಿದೆ. ಸಾಮಾನ್ಯವಾಗಿ ಭಕ್ತಾದಿಗಳು ಕಾಣಿಕೆ ರೂಪದಲ್ಲಿ ಹಣ, ಚಿನ್ನವನ್ನು ಅರ್ಪಿಸುತ್ತಾರೆ. ಆದರೆ ಈ ದೇವಸ್ಥಾನದಲ್ಲಿ ಮಣ್ಣಿನ ಗೊಂಬೆಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಈ ದೇವಸ್ಥಾನಕ್ಕೆ 700 ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ. 13 ನೇ ಶತಮಾನದಲ್ಲಿ ಆಡಳಿತದಲ್ಲಿದ್ದ ಬಾಂಗಾ ಅರಸರು ದೇವಳದ ಅಭಿವೃದ್ಧಿಗೆ ಕಾರಣಕರ್ತರು ಎಂದು ಹೇಳಲಾಗಿದೆ. ಈ ಬಗ್ಗೆ ದೇವಾಲಯದ ಗರ್ಭಗುಡಿಯ ಎದುರು ಇರುವ ನಂದೀಶನ ಮೂರ್ತಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ.

ಸೂರ್ಯ ದೇವಾಲಯದ ಹಿಂದಿರುವ ದಂತ ಕತೆ : ಹಿಂದೆ ಹೆಂಗಸೊಬ್ಬಳು ತನ್ನ ಮಗ ಸುರೆಯನೊಂದಿಗೆ ಕಾಡಿಗೆ ಸೊಪ್ಪು ತರಲು ಹೋಗಿದ್ದಳು. ಆ ಸಂದರ್ಭ ಸೊಪ್ಪಿನೆಡೆ ಮರೆಯಾಗಿದ್ದ ಲಿಂಗರೂಪಿ ಶಿಲೆಗೆ ಕತ್ತಿ ತಾಗಿ ರಕ್ತ ಚಿಮ್ಮಿ ಹರಿಯಿತು. ಗಾಬರಿಗೊಂಡ ಆಕೆ ತನ್ನ ಮಗನನ್ನು ‘ಓ, ಸುರೆಯ’ಎಂದು ಕೂಗಿದಳು. ಆ ಘಟನೆ ಬಳಿಕ ಕ್ಷೇತ್ರಕ್ಕೆ ಸುರಿಯ, ಸೂರ್ಯ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಆ ಲಿಂಗ ರೂಪಿ ಶಿಲೆಗೆ ಪೂಜೆ ನಡೆಸಿ ದೇವಾಲಯ ನಿರ್ಮಾಣ ಮಾಡಲಾಯಿತಂತೆ.

ದೇವಸ್ಥಾನದ ಉತ್ತರಕ್ಕೆ ಸುಮಾರು ೧೦೦ ಮೀ. ದೂರದಲ್ಲಿ ಪ್ರಶಾಂತವಾದ ವನರಾಶಿಯ ಮಧ್ಯೆ ಮೇಲಿನ ಘಟನೆ ನಡೆಯಿತೆಂದು ಹೇಳಲಾಗುವ ಪ್ರದೇಶ ಹರಕೆಬನ ಇದೆ. ಮಣ್ಣಿನ ಮೂರ್ತಿಯೇ ಇಲ್ಲಿನ ಹರಕೆ. ಭಕ್ತರ ಪ್ರಾರ್ಥನೆಗೆ ಸ್ಪಂದಿಸುವ ರುದ್ರ ಪ್ರತಿಫಲವಾಗಿ ಮಣ್ಣಿನ ಮೂರ್ತಿಯನ್ನಷ್ಟೇ ಬಯಸುತ್ತಾನೆ ಎಂಬುದು ಆರಾಧಕರ ನಂಬಿಕೆ. ಭಕ್ತಾದಿಗಳು ತಾವು ಇರುವ ಜಾಗದಿಂದಲ್ಲೇ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡಬಹುದು.

ಸಂಕಲ್ಪ ಈಡೇರಿದ ನಂತರ ದೇವಸ್ಥಾನಕ್ಕೆ ಬಂದು ಮಣ್ಣಿನ ಗೊಂಬೆಗಳನ್ನು ಅರ್ಪಿಸಬಹುದು. ಅದಕ್ಕೆಂದು ದೇವಸ್ಥಾನಕ್ಕೆ ಬರುವ ಅವಶ್ಯಕತೆ ಇಲ್ಲ. ಹರಕೆ ಬನದ ಮೂಲದ ಬಗ್ಗೆ ಇರುವ ಸ್ಥಳಪುರಾಣ ಕಥೆ : ಭೃಗು ಮಹರ್ಷಿಯ ಶಿಷ್ಯರೊಬ್ಬರು ತಪಸ್ಸು ಮಾಡುತ್ತಿದ್ದು, ಅವರ ತಪಸ್ಸಿಗೊಲಿದ ಶಿವಪಾರ್ವತಿಯರು ಪ್ರತ್ಯಕ್ಷರಾಗಿ ಲಿಂಗರೂಪದಲ್ಲಿ ನೆಲೆಯಾದರು ಎಂಬ ಪ್ರತೀತಿ ಇದೆ. ಇದರ ಕುರುಹಾಗಿ ಇಲ್ಲಿ ಎರಡು ಲಿಂಗರೂಪಿ ಶಿಲೆಗಳು ಹಾಗೂ ಶಿಲಾಪಾದಗಳೂ ಇವೆ ಅಂತೆ.
‌ ‌ ‌ ‌ ‌ ‌ ‌ ‌
ಈ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಬಳಿಯಿರುವ ನಾಡಗ್ರಾಮದ ಸೂರ್ಯ ಎಂಬ ಸ್ಥಳದಲ್ಲಿದೆ. ಧರ್ಮಸ್ಥಳದ ಉತ್ತರಕ್ಕೆ ಕೇವಲ 15 ಕಿ.ಮೀ ದೂರದಲ್ಲಿ ಉಜಿರೆಯಿದ್ದು ಇಲ್ಲಿಂದ ಈ ದೇವಸ್ಥಾನ ಕೇವಲ ಐದು ಕಿ.ಮೀ ದೂರದಲ್ಲಿದೆ. ಬೆಳ್ತಂಗಡಿಯಿಂದ ಉಜಿರೆಗೆ ಹೋಗುವ ಮಾರ್ಗದಲ್ಲಿ ಎಡ ತಿರುವು ಪಡೆದು ನಾಡಗ್ರಾಮ ತಲುಪಿ ಅಲ್ಲಿಂದ ಈ ದೇವಸ್ಥಾನಕ್ಕೆ ತಲುಪಬಹುದು.

ದೇವಸ್ಥಾನವು ಚೊಕ್ಕವಾಗಿ ನಿರ್ಮಾಣವಾಗಿದ್ದು ಹಚ್ಚ ಹಸಿರಿನ ಮಧ್ಯೆ ನೆಲೆಸಿದ್ದು ಕಣ್ಣಿಗೆ ತಂಪನ್ನೆರೆಯುತ್ತದೆ. ಸುತ್ತಲಿನ ರಮಣೀಯ ಪ್ರಕೃತಿ ಸೌಂದರ್ಯ ಎಂಥವರನ್ನೂ ಮೂಕವಿಸ್ಮಿತರನ್ನಾಗುವಂತೆ ಮಾಡುತ್ತದೆ. ದೇವಾಲಯ ಆವರಣದಲ್ಲಿರುವ ಕಲ್ಯಾಣಿಯಂತೂ ನೀಲ ವರ್ಣದ ಜಲದಿಂದ ತುಂಬಿದ್ದು ಅತ್ಯದ್ಭುತವಾಗಿ ಕಾಣುತ್ತದೆ.

ಇಲ್ಲಿನ ಇನ್ನೊಂದು ವಿಶೇಷವೆಂದರೆ ಮಣ್ಣಿನ ಬೊಂಬೆಗಳು. ಹೌದು, ನಿಮ್ಮ ಇಚ್ಛೆ ಈಡೇರಿದರೆ ನೀವು ವ್ಯಯಕ್ತಿಕವಾಗಿ ಇಲ್ಲಿಗೆ ಭೇಟಿ ನೀಡಿ ನಿಮ್ಮ ಇಚ್ಛೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಣ್ಣಿನ ಬೊಂಬೆಯನ್ನು ಕೊಂಡು ದೇವಸ್ಥಾನದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಅದನ್ನು ದೇವರಿಗೆಂದು ಅರ್ಪಿಸಬೇಕು. ನಂತರ ಈ ಉಡುಗೊರೆಗಳನ್ನು ಒಂದು ಕೊಣೆಯಲ್ಲಿ ಇಡಲಾಗುತ್ತದೆ. ಇದನ್ನು ಪ್ರಾರ್ಥನಾ ಮಂದಿರವೆಂದು ಕರೆಯುತ್ತಾರೆ.

ಪ್ರಾರ್ಥನಾ ಮಂದಿರದಲ್ಲಿ ನೀವು ದೇವರನ್ನು ಪ್ರಾರ್ಥಿಸಿ ಅವನಿಗೆ ಕೃತಜ್ಞತೆಗಳನ್ನು ಅರ್ಪಿಸಬಹುದು ಹಾಗೂ ಬೇಕಿದ್ದರೆ ಮತ್ತೆ ಏನಾದರೂ ಹರಕೆ ಹೊತ್ತುಕೊಳ್ಳಬಹುದು. ಇಲ್ಲಿರುವ ಅಪಾರ ಸಂಖ್ಯೆಯ ವೈವಿಧ್ಯಮಯ ಮಣ್ಣಿನ ಬೊಂಬೆಗಳು ಇಟ್ಟಿರುವುದನ್ನು ನೋಡಿದಾಗ ಈ ಕ್ಷೇತ್ರದ ಮಹಿಮೆಯನ್ನು ಊಹಿಸಿಕೊಳ್ಳಬಹುದು.

ಮೇಜು, ಕುರ್ಚಿಗಳಿಂದ ಹಿಡಿದು ಮನುಷ್ಯನ ವಿವಿಧ ಅಂಗಾಂಗಗಳು, ದೇಹ, ಗಣಕಯಂತ್ರ, ವಾಹನಗಳು, ವೈದ್ಯಕೀಯ ಉಪಕರಣಗಳು ಹೀಗೆ ಹಲವಾರು ವೈವಿಧ್ಯಮಯ ಮಣ್ಣಿನ ರಚನೆಗಳು ದೇವರಿಗೆ ಸಮರ್ಪಿಸಲು ದೊರೆಯುತ್ತವೆ. ಉದಾಹರಣೆಗೆ, ಯಾರಿಗಾದರೂ ಆರೋಗ್ಯ ಕೆಟ್ಟು, ಆ ಕುರಿತು ದೇವರಲ್ಲಿ ಪ್ರಾರ್ಥಿಸಿ ನಂತರ ಗುಣಮುಖ ಹೊಂದಿದರೆ ಅವರು ದೇಹದ ಮಣ್ಣಿನ ಬೊಂಬೆಯನ್ನು ಸಮರ್ಪಿಸಬೇಕು.

ಹೀಗೆ ಕೈ, ಕಾಲು, ಮಕ್ಕಳು, ಹೃದಯ, ಕಿವಿಗಳು, ಕಣ್ಣುಗಳು, ಇಲಿ, ಕೋಳಿ, ನಾಯಿ, ಪುಸ್ತಕ, ಪೆನ್ನು, ನೋಟು, ದ್ವಿಚಕ್ರ ವಾಹನ ಹಾಗೂ ಇನ್ನೂ ಅನೇಕ ಬಗೆಯ ಮಣ್ಣಿನ ರಚನೆಗಳು ಹರಕೆಯ ಉಡುಗೊರೆಗಳಾಗಿ ದೊರೆಯುತ್ತವೆ. ನೆನಪಿಡಬೇಕಾದ ಇನ್ನೊಂದು ವಿಷಯವೆಂದರೆ ನಿಮ್ಮ ಬಯಕೆ ಈಡೇರಿದ್ದಲ್ಲಿ ಮಾತ್ರವೇ ನೀವು ಉಡುಗೊರೆಗಳನ್ನು ಒಪ್ಪಿಸಲು ಅರ್ಹರು.
‌ ‌ ‌ ‌ ‌
ಕೇಳಿಕೊಂಡ ಬೇಡಿಕೆ ಈಡೇರಿದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ಅಕ್ಕಿ-ತೆಂಗಿನಕಾಯಿ ಇಟ್ಟ ಹರಿವಾಣದಲ್ಲಿ ಮಣ್ಣಿನ ಗೊಂಬೆ ಇಟ್ಟು ಬನಕ್ಕೆ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಅರ್ಪಿಸುವ ಮಣ್ಣಿನ ಗೊಂಬೆಗಳು ದೇವಸ್ಥಾನದಲ್ಲೆ ದೊರೆಯುತ್ತದೆ. ಈ ಗೊಂಬೆಗಳನ್ನು ಕೆಮ್ಮಣುನಿಂದ ಮಾಡಿರುತ್ತಾರೆ. ಇಲ್ಲಿ ದನ-ಕರು, ತಾಯಿ-ಮಗು, ಮನುಷ್ಯ, ಹೃದಯ, ಮೂತ್ರಪಿಂಡ, ಬೈಕ್, ಕಾರು, ಮನೆ, ಬೆಕ್ಕು, ನಾಯಿ, ಕಟ್ಟಡ, ಬಸ್, ವಿಮಾನ, ಕುರ್ಚಿ, ಮೇಜು, ಕಂಪ್ಯೂಟರ್, ಮೊಬೈಲ್ ಹೀಗೆ ಎಲ್ಲವೂ ಈ ಬನದಲ್ಲಿ ಹರಕೆಯ ವಸ್ತುಗಳಾಗಿ ಕಾಣಸಿಗುತ್ತದೆ. ‌ ‌ ‌ ‌ ‌
ಕರ್ನಾಟಕದ ಇತರೆ ಭಾಗಗಳಿಂದ ಇಲ್ಲಿಗೆ ಬರಲಿಚ್ಛಿಸುವವರು ರೈಲು ಹಾಗೂ ಬಸ್ಸುಗಳ ಮೂಲಕ ಮಂಗಳೂರು ಅಥವಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಅಲ್ಲಿಂದ ಸ್ಥಳೀಯವಾಗಿ ಬಾಡಿಗೆಗೆ ದೊರಕುವ ಜೀಪು ಹಾಗೂ ಖಾಸಗಿ ಬಸ್ಸುಗಳ ಮೂಲಕ ಧರ್ಮಸ್ಥಳ ತಲುಪಿ ಇಲ್ಲವೆ ಉಜಿರೆ ತಲುಪಿ ಅಲ್ಲಿಂದ ರಿಕ್ಷಾಗಳ ಮೂಲಕ ಇಲ್ಲಿಗೆ ತಲುಪಬಹುದು. ‌


‌ ‌ ‌ ‌ ‌ ‌ ‌ ‌ ‌ ‌ ‌ ‌
ದೇವಸ್ಥಾನದ ಪೂರ್ಣ ವಿಳಾಸ : ಶ್ರೀ ಸದಾಶಿವ ರುದ್ರ ದೇವಸ್ಥಾನ (ಸುರ್ಯ), ನಡ ಗ್ರಾಮ, ಪೆರ್ಮಾನು, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ-೫೭೪೨೧೪. (ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ 13 ಕಿಮೀ. ಬೆಳ್ತಂಗಡಿಯಿಂದ ಕಿಲ್ಲೂರು ಮಾರ್ಗವಾಗಿ 8 ಕಿಮೀ.) ದೇವರ ದರ್ಶನ : ಬೆಳಗ್ಗೆ 7.30 ರಿಂದ 2ಗಂಟೆ ವರೆಗೆ ಮತ್ತು ಸಂಜೆ 4 ರಿಂದ 6.30 ವರೆಗೆ. ಪೂಜಾ ಸಮಯ : ಬೆಳೆಗ್ಗಿನ ಪೂಜೆ 8 ಗಂಟೆಗೆ, ಮಧ್ಯಾಹ್ನ ಪೂಜೆ 1 ಗಂಟೆಗೆ , ಸಂಜೆಯ ಪೂಜೆ 7 ಗಂಟೆಗೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here