ಸೂರ್ಯ, ವಿಶ್ವದ ಆತ್ಮ. ಸೂರ್ಯನ ಮಹತ್ವವನ್ನು ಸಂಪೂರ್ಣವಾಗಿ ತಿಳಿಯಲು ಇದನ್ನು ಓದಿ.

0
2357

ಸೂರ್ಯ, ವಿಶ್ವದ ಆತ್ಮ : ವೇದಕಾಲದಿಂದಲೂ ಸೂರ್ಯಾರಾಧನೆ ನಡೆದುಕೊಂಡು ಬಂದಿದೆ. ಋಗ್ವೇದದಲ್ಲಿ ಸೂರ್ಯನಿಗೆ ಸಂಬಂಧಿಸಿದಂತೆ ಅರವತ್ತು ಮಂತ್ರಗಳಿವೆ. ಸೂರ್ಯನ ಮಹಿಮೆಯನ್ನು ಸವಿಸ್ತಾರವಾಗಿ ವರ್ಣಿಸಿರುವುದರಿಂದ ಅಷ್ಟಾದಶ ಮಹಾ ಪುರಾಣಗಳಲ್ಲಿ ಒಂದಾದ ಭವಿಷ್ಯ ಪುರಾಣವನ್ನು ಸೌರ ಪುರಾಣ ಎಂದೂ ಕರೆಯುತ್ತಾರೆ. ಸೂರ್ಯನೇ ವಿಶ್ವದ ಆತ್ಮ. ಅವನಿಲ್ಲದೆ ಜಗತ್ತೇ ಇಲ್ಲ. ಅವನು ಪ್ರಾಣಕಾರಕ ಮತ್ತು ಪ್ರಾಣಾಧಾರಕ. ಅಲ್ಲದೆ ಅವನು ಶ್ರಮಜೀವಿ.

ಅವನದು ನಿರಂತರ ಚಟುವಟಿಕೆ. ಹಾಗೆಯೇ ಅವನು ಜೀವಿಗಳನ್ನು ಕರ್ಮ ಮಾಡಲು ಪ್ರೇರೇಪಿಸುತ್ತಾನೆ. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಸೂರ್ಯೋಪಾಸನೆಯ ಬಗ್ಗೆ ಸವಿಸ್ತಾರವಾದ ವಿವರಣೆಯಿದೆ.ಶ್ರೀರಾಮನು ಅಗಸ್ತ್ಯರು ಬೋಧಿಸಿದ ‘ ಆದಿತ್ಯ ಹೃದಯಂ’ ಸ್ತೋತ್ರ ಪಠಿಸಿ ಹೆಚ್ಚು ಶಕ್ತಿಯನ್ನು ಪಡೆದು ರಾವಣನನ್ನು ಸಂಹರಿಸಿದನು. ಪಾಂಡವರು ವನವಾಸದಲ್ಲಿದ್ದಾಗ ಸೂರ್ಯನಿಂದ ಅಕ್ಷಯ ಪಾತ್ರೆಯನ್ನು ಪಡೆದರು. ಸತ್ಯಭಾಮೆಯ ತಂದೆಯಾದ ಸತ್ರಾಜಿತನು ಸೂರ್ಯನಿಂದ ಶಮಂತಕ ಮಣಿಯನ್ನು ಪಡೆದನು.

ಸರ್ವರೋಗ ನಿವಾರಣೆಗಾಗಿ ಸೂರ್ಯನನ್ನು ಆರಾಧಿಸಬೇಕು (ಆರೋಗ್ಯಂ ಭಾಸ್ಕರಾದಿಚ್ಛೇತ್). ಬೆಳಗಿನ ಸೂರ್ಯ ಕಿರಣಗಳಲ್ಲಿ ವಿಟಮಿನ್ ಡಿ ಹೇರಳವಾಗಿರುತ್ತದೆ. ಪ್ರಕಾಶಿಸುವ ಸೂರ್ಯ ನಾನೇ ಎಂದು ಗೀತೆಯಲ್ಲಿ ಭಗವಂತನೇ ಹೇಳಿದ್ದಾನೆ. ನಮಗೆಲ್ಲವನ್ನೂ ಕೊಟ್ಟಿರುವ ಸೂರ್ಯನನ್ನು ಆಸ್ತಿಕರು ಮಕರ ಸಂಕ್ರಮಣ ಮತ್ತು ರಥಸಪ್ತಮಿಯಂದು ವಿಶೇಷವಾಗಿ ಪೂಜಿಸುತ್ತಾರೆ. ಹಾಗೆಯೇ ಸಂಧ್ಯೋಪಾಸನೆ ಮತ್ತು ಸೂರ್ಯ ನಮಸ್ಕಾರಗಳ ಮೂಲಕ ಸೂರ್ಯನನ್ನು ಆರಾಧಿಸಲಾಗುತ್ತದೆ.

ಸೂರ್ಯನ ಪ್ರಾಮುಖ್ಯತೆಯನ್ನು ಮನಗಂಡ ವಿಶ್ವದ ಎಲ್ಲ ಸಂಸ್ಕೃತಿಗಳೂ ಒಂದಲ್ಲ ಒಂದು ರೀತಿಯಲ್ಲಿ ಸೂರ್ಯನನ್ನು ಆರಾಧಿಸುತ್ತವೆ. ಉದಾಹರಣೆಗೆ ಜಪಾನಿನಲ್ಲಿ, ಸೂರ್ಯನು ಶಿಶಿರ ಋತುವಿನಲ್ಲಿ ಗವಿಯಿಂದ ಹೊರಬರುವನೆಂದೂ, ಆ ಸಮಯ ಪವಿತ್ರವೆಂದೂ ಪರಿಗಣಿಸಲಾಗಿದೆ. ಬ್ರಹ್ಮಾಂಡದ ಕೇಂದ್ರದಲ್ಲಿ ಸೂರ್ಯನು ನೆಲೆಸಿದ್ದು,ಅವನ ಆಧಾರದ ಮೇಲೆ ದಿಕ್ಕುಗಳು ಮತ್ತು ಚತುರ್ದಶ ಭುವನಗಳನ್ನು ವಿಭಾಗಿಸಲ್ಪಟ್ಟಿವೆ. ಭೂಮಿಯಿಂದ ಒಂದು ಲಕ್ಷ ಯೋಜನಗಳ ಮೇಲೆ ಸೂರ್ಯ ಮಂಡಲವಿದೆ ಎಂಬುದು ಪುರಾಣಕಾರರ ಅಭಿಮತ.

ಆಶ್ಚರ್ಯವೆಂದರೆ ಬೇರೆ ದೇವತೆಗಳಿಗೆ ಇರುವಂತೆ ಸೂರ್ಯನಿಗೆ ಹೆಚ್ಚು ಮಂದಿರಗಳಿಲ್ಲ. ಆದರೆ ಒಡಿಶಾದ ಕೊನಾರ್ಕ್ ಮಂದಿರ ಬಹಳ ಪ್ರಸಿದ್ಧವಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಸೂರ್ಯನನ್ನು ಒಂದು ಗ್ರಹವೆಂದು ಪರಿಗಣಿಸಲಾಗಿದೆ. ಆದರೆ ವಿಜ್ಞಾನಿಗಳ ಪ್ರಕಾರ, ಸೂರ್ಯನು ಕ್ಷೀರಪಥದಲ್ಲಿರುವ ಒಂದು ಬೃಹತ್ ನಕ್ಷತ್ವ. ಇಂತಹ ಬೃಹತ್ತಾದ ಕ್ಷೀರಪಥದಲ್ಲಿ ಸೂರ್ಯನು ಒಂದು ಸಣ್ಣ ಚುಕ್ಕಿಯಂತಿದ್ದಾನೆ. ಬ್ರಹ್ಮಾಂಡದಲ್ಲಿ ಇಂತಹ ಅನೇಕ ಗ್ಯಾಲಕ್ಸಿಗಳಿವೆ.

ವಿಜ್ಜಾನಿಗಳ ಪ್ರಕಾರ, ಹತ್ತು ಬಿಲಿಯನ್ ವರ್ಷಗಳ ಆಯಸ್ಸಿರುವ ಸೂರ್ಯನ ಜೀವನದಲ್ಲಿ ಒಂದು ಲಕ್ಷ ಮಾನವ ವರ್ಷಗಳು ಒಂದು ಕ್ಷಣಕ್ಕೆ ಸಮಾನ. ಕೂರ್ಮ ಪುರಾಣದ ಪ್ರಕಾರ, ಸೂರ್ಯ ಕಿರಣಗಳ ಸಂಖ್ಯೆ ಅಗಣಿತ. ಆದರೆ ಇವುಗಳಲ್ಲಿ ಈ ಏಳು ಪ್ರಧಾನವಾಗಿವೆ. ಸುಷುಮ್ನಾ, ಇದು ಚಂದ್ರನನ್ನು ಪೋಷಿಸುತ್ತದೆ. ಹರಿಕೇಶ, ಇದು ನಕ್ಷತ್ರಗಳನ್ನು ಪೋಷಿಸುತ್ತದೆ. ವಿಶ್ವಕರ್ಮ, ಇದು ಬುಧನನ್ನು ಪೋಷಿಸುತ್ತದೆ. ಸಂಯದ್ವಸು, ಇದು ಅಂಗಾರಕನನ್ನು ಪೋಷಿಸುತ್ತದೆ.

ಅರ್ವಾವಸು, ಇದು ಬೃಹಸ್ಪತಿಯನ್ನು ಪೋಷಿಸುತ್ತದೆ. ಸ್ವರ, ಇದು ಶನೈಶ್ಚರನನ್ನು ಪೋಷಿಸುತ್ತದೆ. ವಿಶ್ವಶ್ರವಸ್, ಇದು ಶುಕ್ರನನ್ನು ಪೋಷಿಸುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here