ಒಂದು ಕಪ್‌ ಟೀಗೆ ₹100: ಮೋದಿಗೆ ಹೋಯಿತೊಂದು ಮೇಲ್‌- ಮುಂದೆ ನಡೆದದ್ದೆಲ್ಲ ಅಚ್ಚರಿಯೋ ಅಚ್ಚರಿ!

0
2301

ಕೊಚ್ಚಿ (ಕೇರಳ): ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಕಪ್‌ ಚಹಕ್ಕೆ 100 ರೂಪಾಯಿ ಪಡೆಯುತ್ತಿದ್ದುದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಸೀದಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೇಲ್‌ ಮಾಡಿದ್ದರು. ಆದರೆ ಅವರ ಕಣ್ಣುಗಳನ್ನೇ ನಂಬದಂಥ ಅಚ್ಚರಿಯೊಂದು ನಡೆದೇ ಹೋಗಿದೆ.

ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾಜಿ ಅನ್ನುವವರು ಮಾಡಿರುವ ಮೇಲ್‌ನಿಂದ ಅಚ್ಚರಿಯೊಂದು ನಡೆದಿದ್ದು, 100 ರೂ.ಗೆ ಮಾರಾಟವಾಗುತ್ತಿದ್ದ ಚಹಾ ಈಗ 15 ರೂಪಾಯಿಗೆ ಇಳಿದಿದೆ!

ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಪರಿ ಬೆಲೆ ವಸೂಲಿ ಮಾಡುತ್ತಿದ್ದುದರಿಂದ ಶಾಜಿ ಅವರು ವಿಪರೀತ ಕೋಪಗೊಂಡಿದ್ದರು. ಆದ್ದರಿಂದ ಕೂಡಲೇ ದುಬಾರಿಗೆ ಬೆಲೆಗೆ ಚಹಾ ಮತ್ತು ತಿಂಡಿಗಳು ಮಾರಾಟವಾಗುತ್ತಿರುವುನ್ನು ನೋಡಿ ಪ್ರಧಾನಿ ಮೋದಿಯವರಿಗೆ ಮೇಲ್‌ ಮಾಡಿದ್ದರು.

ಈ ಮೇಲ್‌ಗೆ ಪ್ರಧಾನಿಯವರು ಸ್ಪಂದಿಸಿರುವುದಾಗಿ ಹೇಳಿರುವ ಶಾಜಿ, ಚಹದ ಬೆಲೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಶಾಜಿಯವರು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಅಲ್ಲಿಯ ಹೋಟೆಲ್‌ಗೆ ಹೋಗಿದ್ದಾರೆ. ಅಲ್ಲಿರುವ ಬೋರ್ಡ್‌ ನೋಡಿ ದಂಗಾಗಿ ಹೋಗಿದ್ದಾರೆ. ಏಕೆಂದರೆ ಚಹಾಗೆ 100 ರೂ, ಮಜ್ಜಿಗೆಗೆ 110 ರೂ. ತಿಂಡಿಗೆ 200 ರೂ ಬೆಲೆ ನಮೂದು ಆಗಿತ್ತು.

ಅಷ್ಟಕ್ಕೆ ಸುಮ್ಮನಾಗದ ಅವರು, ಈ ಪರಿ ದುಬಾರಿ ದರದಲ್ಲಿ ಯಾಕೆ ಮಾರಾಟ ಮಾಡಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅಧಿಕಾರಿಗಳ ಜತೆ ಮಾತಿಗೆ ಮಾತು ಬೆಳೆದು ಜಗಳ ಕೂಡ ಆಯಿತೇ ವಿನಾ, ಬೆಲೆಯೂ ಕಮ್ಮಿಯಾಗಲಿಲ್ಲ. ಶಾಜಿಯವರ ಸಮಸ್ಯೆಗೆ ಪರಿಹಾರವೂ ಸಿಗಲಿಲ್ಲ.

ಎಂಆರ್‌ಪಿ ದರ ನಿಗದಿಯಾಗಿದ್ದರೂ ಅಂಗಡಿಗಳು 4-5 ಪಟ್ಟು ಹೆಚ್ಚು ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂತು. ಈ ವಿಚಾರವನ್ನು ಕೊಚ್ಚಿ ವಿಮಾನ ನಿಲ್ದಾಣ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ನನಗೆ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ನಾನು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ದೂರು ನೀಡಿದ್ದೆ ಎಂದು ಶಾಜಿ ವಿವರಿಸಿದರು.

ಬೇರೆ ದಾರಿ ಕಾಣದ ಅವರು, ಇಂಥ ಸಮಸ್ಯೆಗಳನ್ನು ಪ್ರಧಾನಿಯವರು ಪರಿಹರಿಸುವ ವಿಶ್ವಾಸದಿಂದ ಆಗಿದ್ದು ಆಗಲಿ ಎಂದು ಮೇಲ್‌ ಮಾಡಿದ್ದಾರೆ. ಆದರೆ ಇಡೀ ದೇಶದ ಜವಾಬ್ದಾರಿ ಹೊತ್ತಿರುವ ಸಂದರ್ಭದಲ್ಲಿ ಸಾಮಾನ್ಯ ನಾಗರಿಕನೊಬ್ಬನ ಮೇಲ್‌ಗೆ ಇಷ್ಟು ಬೇಗನೇ ಮೋದಿಯವರು ಸ್ಪಂದಿಸುತ್ತಾರೆ ಎಂದು ತಾವು ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಎನ್ನುತ್ತಾರೆ ಶಾಜಿ. ಮೇಲ್‌ ಕಳುಹಿಸಿದ ಕೆಲವು ದಿನಗಳ ನಂತರ ಪ್ರಧಾನಿ ವೆಬ್‌ಸೈಟ್‌ ಗಮನಿಸಿದೆ. ಈ ವೇಳೆ ನನ್ನ ಪತ್ರದ ಹಿನ್ನೆಲೆಯಲ್ಲಿ ಚಹಾಗೆ 15 ರೂ., ಕಾಫಿಗೆ 20 ರೂ., ವಡೆಗೆ 15 ರೂ. ಗರಿಷ್ಠ ದರ ನಿಗದಿ ಪಡಿಸುವಂತೆ ವಿಮಾನ ನಿಲ್ದಾಣಗಳಿಗೆ ನಿರ್ದೇಶನ ನೀಡಿರುವ ವಿಚಾರ ತಿಳಿಯಿತು. ಇದರಿಂದ ನನಗೆ ತೀವ್ರ ಅಚ್ಚರಿಯಾಯಿತು ಎಂದಿದ್ದಾರೆ.

ವಿಮಾನ ನಿಲ್ದಾಣಗಳಿಗೆ ಪ್ರಯಾಣಿಕರು ಸಾಧಾರಣವಾಗಿ 2-3 ಗಂಟೆ ಮೊದಲೇ ಬರುತ್ತಾರೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿರುವ ಆಹಾರವನ್ನು ಬಲವಂತವಾಗಿ ದುಬಾರಿ ಬೆಲೆ ನೀಡಿ ಸೇವಿಸಬೇಕಾಗುತ್ತದೆ. ಹಿರಿಯರು ಮತ್ತು ಹಜ್‌ ಪ್ರವಾಸಿಗರಿಗೆ ಇದು ಬಹಳ ದುಬಾರಿಯಾಗುತ್ತದೆ ಎಂದು ಹೇಳಿದರು.

ಮೂಲ : ವಿಜಯವಾಣಿ

LEAVE A REPLY

Please enter your comment!
Please enter your name here