ಹಿಂದೂ ಧರ್ಮ ಶ್ರೇಷ್ಠ ಧರ್ಮ. ಬಹಳ ಪುರಾತನ ಈ ಧರ್ಮ ಹಲವು ವೈವಿಧ್ಯಮಯ ವೈಜ್ಞಾನಿಕ ಹಾಗೂ ವೈಚಿತ್ರ್ಯಗಳನ್ನು ಒಳಗೊಂಡಿದೆ. ನಮ್ಮ ಧರ್ಮದಲ್ಲಿರುವ ದೇವರು ಬೇರೆ ಎಲ್ಲೂ ಇಲ್ಲ ಅಂತ ಅನ್ನಿಸುತ್ತದೆ. ಮನುಷ್ಯ ಸತ್ಯವಂತನಾಗಲು, ವಿಚಾರವಂತನಾಗಲು ಹಾಗೂ ಧರ್ಮಿಷ್ಠನಾಗಲು ನಮ್ಮ ಆಚಾರ ವಿಚಾರಗಳು ಸಹಾಯ ಮಾಡುತ್ತದೆ.
ನಾವು ದೇವಸ್ಥಾನಕ್ಕೆ ಭೇಟಿ ಕೊಡುತ್ತೇವೆ. ನಮಗೆ ಒಳ್ಳೆಯದು ಮಾಡು, ನಮ್ಮ ಮನೆಯಲ್ಲಿ ಶಾಂತಿ ಕೊಡು , ಮಕ್ಕಳು ಮರಿಗಳಿಗೆ ಆರೋಗ್ಯ, ಬುದ್ದಿ ಕೊಡು ಎಂದು ಕೇಳಲು ದೇವರ ದರ್ಶನ ಮಾಡುತ್ತೇವೆ. ದೇವಸ್ಥಾನಕ್ಕೆ ಹಣ್ಣು ಕಾಯಿ ತೆಗೆದುಕೊಂಡು ಹೋಗಿ ಪೂಜೆ ಮಾಡಿಸುತ್ತೇವೆ. ಕಾಯಿ ಎಂದರೆ ಅದು ತೆಂಗಿನಕಾಯಿ, ಹಣ್ಣು ಎಂದರೆ ಅದು ಬಾಳೆಹಣ್ಣು ಎಂದರ್ಥ. ನಿಮಗೆ ಮನೆಯಲ್ಲಿ ಹಣ್ಣು ಕಾಯಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗು ಎಂದರೆ ನೀವು ಮರು ಪ್ರಶ್ನಿಸದೆ ಬಾಳೆಹಣ್ಣು ಮತ್ತು ತೆಂಗಿನಕಾಯಿ ತೆಗೆದುಕೊಂಡು ಹೋಗೋಕೆ ಇದೇ ಕಾರಣ.
ನಿಮಗೆ ಒಂದು ಸಂದೇಹ ಇರಬಹುದು ಹೂವಿನಲ್ಲಿ ಬಗೆಬಗೆಯ ರೀತಿಯ ಹೂವುಗಳನ್ನು ಪೂಜೆಗೆ ತೆಗೆದುಕೊಂಡು ಹೋಗುತ್ತೇವೆ. ಆದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಮಾತ್ರ ತೆಗೆದುಕೊಂಡು ಹೋಗ್ತೀವಲ್ಲ ಏಕೆ ಅಂತ! ಅದಕ್ಕೆ ಉತ್ತರ ನಮ್ಮ ಹಿರಿಯರು ಯಾವುದೇ ಆಚಾರಗಳನ್ನು ಸುಮ್ಮನೆ ಮಾಡಿಲ್ಲ. ಅದಕ್ಕೆ ಒಂದು ಅರ್ಥವಿದೆ.
ತೆಂಗಿನಕಾಯಿ ನಮ್ಮ ಅಂತರಂಗಕ್ಕೆ ಹೋಲಿಸಲಾಗುತ್ತೆ. ತೆಂಗಿನಕಾಯಿ ಸಿಪ್ಪೆ, ಕರಟ, ಕಾಯಿಚೂರು ಹಾಗೂ ನೀರನ್ನು ಹೊಂದಿದೆ. ಅಂದರೆ ಬಾಹ್ಯ ಕೊಳಕು ವಿಚಾರದಿಂದ ಒಳಗಿನ ಪರಿಶುದ್ಧ ಗಂಗೆಯಂತೆ ಬದಲಿಸು ಎಂಬರ್ಥ ಕೊಡುತ್ತೆ.
ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳು ತಿಂದು ಬಿಸಾಡಿದರೆ ಅದರಿಂದ ಏನೂ ಹುಟ್ಟುವುದಿಲ್ಲ. ನಮಗೆ ಈ ಜನ್ಮ ಮಾತ್ರ ಸಾಕು. ಬೇರೆ ಜನ್ಮ ಹೊಂದದೆ ಮುಕ್ತಿ ಕೊಡು ಎಂಬ ಸಂಕೇತ ಅದು.
ಬೇರೆ ಗಿಡಗಳು ಎಂಜಲುಗಳಿಂದ ಹುಟ್ಟುತ್ತವೆ. ಅಂದರೆ ನಾವು ಯಾವುದೇ ಹಣ್ಣು ತಿಂದು ಅದರ ಒಳಗಿನ ಬೀಜವನ್ನು ಬಿಸಾಡಿದರೆ ಅದರಿಂದ ಹೊಸ ಗಿಡ ಹುಟ್ಟುತ್ತೆ. ಆದರೆ ಬಾಳೆ ಹಣ್ಣು ತಿಂದು ಸಿಪ್ಪೆ ಬಿಸಾಡಿದರೆ ಏನೂ ಹುಟ್ಟುವುದಿಲ್ಲ. ತೆಂಗಿನಕಾಯಿ ಅಷ್ಟೇ. ಕಾಯಿ ತಿಂದು ಕರಟ ಬಿಸಾಡಿದರೆ ಅದು ಹುಟ್ಟುವುದಿಲ್ಲ.
ಬಾಳೆದಂಡಿನಿಂದ ಇನ್ನೂಂದು ಬಾಳೆಗಿಡ ಹುಟ್ಟುತ್ತೆ. ಒಡೆಯದ ಪೂರ್ಣ ತೆಂಗಿನಕಾಯಿ ಇನ್ನೊಂದು ಸಸಿಯಾಗುತ್ತೆ. ಎಂಜಲಿನಿಂದ ಬೆಳೆಯದ ಪರಿಶುದ್ಧವಾದ ಪದಾರ್ಥಗಳೇ ಭಗವಂತನ ಸೇವೆಗೆ ಉತ್ತಮ.