ಸೂರ್ಯನ ಜತೆ ವಿಶ್ವಕರ್ಮನ ಮಗಳು ಸಂಜನಾಳ ಮದುವೆ ಮಾಡುವುದು, ಇಂದ್ರನ ಆಸ್ಥಾನದಲ್ಲಿ ನಿಶ್ಚಯ ಆಗಿರುತ್ತದೆ. ಒಂದು ದಿನ ತಂದೆಯಿಂದ ಅಪ್ಪಣೆ ಪಡೆದು, ಸೂರ್ಯನ ಭೇಟಿ ಆಗಲು ಸಂಜನಾ ಹೋದಾಗ, ಅವಳಿಗೆ ಸೂರ್ಯನ ಪ್ರಖರತೆ ಮತ್ತು ಶಾಖವನ್ನು ಎದುರಿಸಲು ಆಗುವುದಿಲ್ಲ. ತೀಕ್ಷ್ಣವಾದ ಬೆಳಕಿನ ಕಿರಣಗಳು ಕಣ್ಣು ಕುಕ್ಕುತ್ತಿದ್ದಂತೆ, ಅವಳು ಸೂರ್ಯನಿಗೆ ಭೇಟಿ ಆಗದೆ ಮರಳಿ ಬಂದು ತಂದೆಗೆ ವಿಷಯ ಅರುಹಿದಾಗ, ವಿಶ್ವಕರ್ಮನು ಚಿಂತಾಕ್ರಾಂತನಾಗಿ ತುಂಬಾ ಆಲೋಚನೆ ಮಾಡಿ, ಸೂರ್ಯನ ಪ್ರಭಾ ವಲಯವನ್ನು ಸರಿಪಡಿಸಲು ಅಣಿಯಾಗುತ್ತಾನೆ, ಇಂದ್ರನಿಂದ ಒಪ್ಪಿಗೆ ಪಡೆದು ಸೂರ್ಯನ ಸುತ್ತುವರೆದ ಪ್ರಭಾವಲಯವನ್ನು, ಸುತ್ತಳತೆಯ ವ್ಯಾಸದ ಮೂಲಕ ಕತ್ತರಿಸಲು ಪ್ರಾರಂಭ ಮಾಡಿ, ಮಗಳಿಗೆ ಅನುಕೂಲಕ್ಕೆ ತಕ್ಕಹಾಗೆ ನಿರ್ಮಿಸಿ ಕೊಡುತ್ತಾನೆ. ಕತ್ತರಿಸಿ ಬಿದ್ದ ಅಪರೂಪದ ಚೂರುಗಳಿಂದ, ಮೂರು ಅನುರೂಪದ ವಸ್ತುಗಳನ್ನು ತಯಾರಿಸುತ್ತಾನೆ –
1) ಪುಷ್ಪಕ ವಿಮಾನ
2) ತ್ರಿಶೂಲ
3) ಸುದರ್ಶನ ಚಕ್ರ
ಪುಷ್ಪಕ ವಿಮಾನವನ್ನು ರಾವಣನು ಕುಬೇರ ದೇವನಿಂದ ಪಡೆದು ಕೊಳ್ಳುತ್ತಾನೆ. ಇದರ ಬಗ್ಗೆ ರಾಮಾಯಣ ಮಹಾಕಾವ್ಯದ ಮೂಲಕ ನಮಗೆ ತಿಳಿದು ಬರುತ್ತದೆ.
ತ್ರಿಶೂಲವು ಮಹೋನ್ನತವಾದ ಅಸ್ತ್ರ, ಇದನ್ನು ಹೊಂದಲು ಮಹಾ ಮಹಿಮನಾದ ಪರಶಿವನಿಗಲ್ಲದೆ ಬೇರೆ ಯಾರಿಗೂ ಸಾಧ್ಯವಿಲ್ಲ ಎಂದು, ದೇವಾನು ದೇವತೆಗಳೆಲ್ಲರೂ ಶಿವನನ್ನು ಬೇಡಿ ಕೊಂಡು, ತ್ರಿಶೂಲವನ್ನು ಶಿವನಿಗೆ ಅರ್ಪಿಸುತ್ತಾರೆ. ಶಿವನು ಪಾರ್ವತಿ ದೇವಿಯೊಂದಿಗೆ ತ್ರಿಶೂಲವನ್ನು ಹಂಚಿ ಕೊಳ್ಳುತ್ತಾನೆ, ಅದಕ್ಕಾಗಿಯೇ ಇಬ್ಬರ ಆಯುಧ ಒಂದೇ ಆಗಿದೆ.
ಇನ್ನು ಸುದರ್ಶನ ಚಕ್ರ, ಹರಿತವಾದ ಗರಗಸಯುಕ್ತ ಹಲ್ಲುಗಳಿಂದ ತನ್ನ ಪರಿಧಿಯ ಸುತ್ತ ವೇಗ ಗತಿಯಲ್ಲಿ ತಿರುಗುತ್ತಾ ಇರುವಾಗ, ಅದರ ಗರಗಸಗಳು ಬೆಂಕಿಯನ್ನು ಕಾರುತ್ತಾ ಗಣಿತದ ಗುಣಾಕಾರ ಪರಿಧಿಯಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ, ಉದಾಹರಣೆಗೆ ಎರಡರಿಂದ – ನಾಲ್ಕು – ಎಂಟು – ಹದಿನಾರು – ಮೂವತ್ತೆರಡು ಹೀಗೆ, ಈ ಸುತ್ತುವ ಪರಿಧಿಯ ವೇಗ ಎಷ್ಟಿರುತ್ತದೆ ಎಂದರೆ ಆಗಿನ ಪುರಾಣ ಕಾಲದಲ್ಲಿ ಲೆಕ್ಕ ಹಾಕಿದ ಪ್ರಕಾರ, ಒಂದು ಸಲ ಈ ಅಸ್ತ್ರವನ್ನು ಏನು ಮಾಡ ಬೇಕೆಂದು ಹೇಳಿ ಪ್ರಯೋಗಿಸಿದರೆ, ಚಕ್ರವು ಹತ್ತು ಲಕ್ಷದಷ್ಟು ಯೋಜನಾ (ಒಂದು ಯೋಜನಾ ಅಂದರೆ ಇಂದಿನ ಹನ್ನೆರಡು ಕಿ.ಮೀ ದೂರ) ಗಾತ್ರವನ್ನು ಪರಿಕ್ರಮಿಸಿ ಮರಳಿ ಬರುತ್ತಿತ್ತು. ಇಂತಹ ಬಹುಗ್ರವಾದ ಚಕ್ರವನ್ನು ಹೊಂದಲು, ಭಗವಾನ್ ವಿಷ್ಣುವಿನಿಂದ ಮಾತ್ರ ಸಾಧ್ಯ ಎಂದು ಮಹಾ ವಿಷ್ಣುವಿಗೆ ಸಮರ್ಪಿಸಲಾಯಿತು, ಇಲ್ಲಿಯೂ ಕೂಡ ವಿಷ್ಣು, ಚಕ್ರವನ್ನು ಮಹಾಲಕ್ಷ್ಮಿಯ ಜತೆ ಹಂಚಿ ಕೊಳ್ಳುತ್ತಾನೆ. ಪೂಜೆ ಮಾಡುವಾಗ ಶಂಖ ಚಕ್ರ ಗಧಾ ಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ ಹೇಳಿ ಕೊಳ್ಳುತ್ತೇವೆ.
ಸುದರ್ಶನವನ್ನು ಎರಡು ರೀತಿಯಲ್ಲಿ ವಿಂಗಡಿಸ ಬಹುದು. ಸು – ಎಂದರೆ ಒಳ್ಳೆಯದು, ದರ್ಶನ – ಸಾಕ್ಷಾತ್ಕಾರ ಅಥವಾ ಸತ್ಯ ದರ್ಶನ ಹೊಂದುವುದು ಎಂದಾಗುತ್ತದೆ, ಇದೆ ಮೂಲವನ್ನು ಅನುಸರಿಸಿ, ವಿಷ್ಣು ತನ್ನ ಅವತಾರಗಳಲ್ಲಿ ದುಷ್ಟರ, ಧರ್ಮನಿಂದಕರ ದಮನಕ್ಕಾಗಿ ಉಪಯೋಗಿಸುತ್ತಾನೆ.
ಸಮುದ್ರ ಮಂಥನದಲ್ಲಿ ಉತ್ಪತ್ತಿಯಾದ ಅಮೃತವನ್ನು ಹಂಚುವ ಸಮಯದಲ್ಲಿ ರಾಹುವಿಗೆ ಸುದರ್ಶನನ ಮೂಲಕ ವಿಷ್ಣು ಪಾಠ ಕಲಿಸುತ್ತಾನೆ. ಹೀಗಾಗಿ ನಾವು ರಾಹು – ಕೇತುಗಳು ದುಷ್ಟ ಗ್ರಹಗಳು ಎಂದು ಅನುಕರಿಸುತ್ತೇವೆ.
ಮಹಾಭಾರತದಲ್ಲಿ ಶಿಶುಪಾಲನು ಕೃಷ್ಣನನ್ನು ನೂರು ಸಾರಿ ಜರಿದು ಮಾತನಾಡಿದ ಮೇಲೆ, ಕೃಷ್ಣನು ಅವನ ಮೇಲೆ ಸುದರ್ಶನ ಚಕ್ರದ ಪ್ರಹಾರ ಮಾಡಿ, ಶಿಶುಪಾಲನ ಹತವಾಗುತ್ತದೆ.
ಮಹಾಭಾರತದ ಯುದ್ಧ ಪರ್ವದಲ್ಲಿ, ಅರ್ಜುನನ ಮಗ ಅಭಿಮನ್ಯುವನ್ನು ಕೊಂದ ಜಯದ್ರಥನನ್ನು ಸೂರ್ಯ ಮುಳುಗುವ ಮುನ್ನ ಕೊಲ್ಲುತ್ತೇನೆ ಎಂದು ಪ್ರತಿಜ್ಞೆ ಮಾಡಿದ ಅರ್ಜುನನಿಗೆ, ಸಾಯಂಕಾಲ ಆದರೂ ಜಯದ್ರಥ ಸಿಗುವುದಿಲ್ಲ, ಆಗ ಕೃಷ್ಣನು ಸುದರ್ಶನನ್ನು ಸೂರ್ಯನಿಗೆ ಅಡ್ಡಲಾಗಿ ಬಿಟ್ಟು, ಕತ್ತಲು ಉಂಟು ಮಾಡುತ್ತಾನೆ, ಕತ್ತಲಾಗಿದ್ದಕ್ಕೆ ಹೊರಗಡೆ ಬರುವ ಜಯದ್ರಥನನ್ನು ನೋಡಿ, ಚಕ್ರವನ್ನು ಮರಳಿ ಕೃಷ್ಣ ಕರೆಸಿ ಕೊಂಡಾಗ ಅರ್ಜುನ ಜಯದ್ರಥನನ್ನು ಕೊಲ್ಲುತ್ತಾನೆ.
ಅಶ್ವಮೇಧ ಯಜ್ಞ ಮಾಡಿದ ಯುಧಿಷ್ಠರ, ಯಾಗದ ಕುದುರೆಯೊಂದಿಗೆ ಅರ್ಜುನನನ್ನು ಕಳುಹಿಸಿದಾಗ, ಅರ್ಜುನನ ಮಗ ಮಣಿಪುರದ ರಾಜ ಬಬ್ರುವಾಹನನ ಜತೆಗೆ ಯುದ್ಧವಾಗುತ್ತದೆ, ಗಂಗೆಯ ಶಾಪದ ಫಲವಾಗಿ, ಅರ್ಜುನ ಮಗನಿಂದಲೇ ಹತನಾಗುತ್ತಾನೆ, ತಂದೆಯನ್ನು ಬದುಕಿಸಲು ನಾಗಮಣಿ ತರಲು ಬಬ್ರುವಾಹನ ಹೋದಾಗ, ತಕ್ಷಕನೆಂಬ ರಾಕ್ಷಸನು ಅರ್ಜುನನ ತಲೆ ಕಡಿದು ಕೊಂಡು ಹೋಗಿರುತ್ತಾನೆ. ಕೊನೆಗೆ ಕೃಷ್ಣ ಅಲ್ಲಿಗೆ ಬಂದು ಸುದರ್ಶನನಿಗೆ ಆಜ್ಞಾಪಿಸುತ್ತಾನೆ, “ಅರ್ಜುನನ ತಲೆ ಎಲ್ಲಿಯೇ ಇದ್ದರೂ ತರಬೇಕೆಂದು” ಸುದರ್ಶನ ಚಕ್ರ ತಕ್ಷಕನನ್ನು ಕೊಂದು ಅರ್ಜುನನ ತಲೆಯನ್ನು ಹೊತ್ತು ತರುತ್ತದೆ. ನಂತರ ನಾಗ ಮಣಿಯಿಂದ ಅರ್ಜುನ ಬದುಕುತ್ತಾನೆ.
ಇನ್ನೊಂದು ಪುರಾಣದಲ್ಲಿ ಹಯಗ್ರೀವ ಎನ್ನುವ ದಾನವನ ಚಕ್ರವಾನ ಎನ್ನುವ ಪರ್ವತವನ್ನು ನಿರ್ಮಿಸಿದ. ವಿಶ್ವಕರ್ಮನಿಂದ ಚಕ್ರಕ್ಕೆ ಸುದರ್ಶನ ಚಕ್ರ ಹೆಸರು ಬಂದಿದೆ ಎನ್ನುವ ಪ್ರತೀತಿಯೂ ಇದೆ.
ದಕ್ಷಿಣ ಭಾರತದ ಪುರಾತನ ದೇವಾಲಯಗಲ್ಲಿ, ವಿಷ್ಣು, ನರಸಿಂಹಸ್ವಾಮಿ, ನಾರಾಯಣ, ಶೇಷಶಯನ ಮಂದಿರಗಳಲ್ಲಿ ಸುದರ್ಶನ ಮೂರ್ತಿಗಳು ನೋಡಲು ಸಿಗುತ್ತವೆ. ಮೂರ್ತಿಯ ಕೈಗಳು ಆಯಾ ಅವತಾರಕ್ಕೆ ಅನುಗುಣವಾಗಿ ಚಕ್ರಾಕಾರದಲ್ಲಿ ನಿರ್ಮಿತವಾಗಿ ನೋಡಲು ಸಿಗುತ್ತವೆ.